ಸಿಎಂ ಬದಲಾವಣೆ ಮಾಡಿ ಎಂದ ಎಚ್.ವಿಶ್ವನಾಥ್ ವಿರುದ್ಧ ಬಿಎಸ್‍ವೈ ಆಪ್ತ ಶಾಸಕರ ಆಕ್ರೋಶ

Update: 2021-06-17 13:55 GMT

ಬೆಂಗಳೂರು, ಜೂ. 17: ರಾಜ್ಯದಲ್ಲಿ `ನಾಯಕತ್ವ ಬದಲಾವಣೆ' ಪ್ರಶ್ನೆಯೇ ಇಲ್ಲ ಎಂದು ವರಿಷ್ಠರು ಸ್ಪಷ್ಟನೆ ನೀಡಿದ್ದರೂ, ಬಿಎಸ್‍ವೈ ಅವರಿಗೆ ಆರೋಗ್ಯ ಸರಿಯಿಲ್ಲ. ಮೊದಲಿನ ಶಕ್ತಿಯೂ ಅವರಿಗಿಲ್ಲ. ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಅವರನ್ನು ಬದಲಾವಣೆ ಮಾಡಿ. ಅವರನ್ನು ಮಾರ್ಗದರ್ಶಕರನ್ನಾಗಿ ನೇಮಿಸುವುದು ಸೂಕ್ತ' ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಆಗ್ರಹಿಸಿದ್ದಾರೆ.

ಗುರುವಾರ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಅರುಣ್ ಸಿಂಗ್ ಅವರ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತಾಡಿದ ವಿಶ್ವನಾಥ್, 'ಲಿಂಗಾಯತ ಪಂಚಮಸಾಲಿ ಸಮುದಾಯದ ಸಚಿವ ಮುರುಗೇಶ್ ಆರ್.ನಿರಾಣಿ, ಹಿರಿಯ ಶಾಸಕ ಬಸನಗೌಡ ಯತ್ನಾಳ್ ಹಾಗೂ ಶಾಸಕ ಅರವಿಂದ ಬೆಲ್ಲದ್ ಅವರು ಇದ್ದು, ಈ ಮೂವರ ಪೈಕಿ ಯಾರಾದರೂ ಒಬ್ಬರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ' ಎಂದು ಮನವಿ ಮಾಡಿದ್ದೇನೆ. `ನಾನು ಬಿಜೆಪಿಯ ಕಾರ್ಯಕರ್ತ. ನಾನು ಯಾರ ಪರ ಅಥವಾ ವಿರುದ್ಧವಾಗಿಯೂ ಇಲ್ಲ' ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

ಸಿಎಂ ಆಯ್ಕೆ ಮಾಡುವುದು ನೀವಲ್ಲ: `ಯಡಿಯೂರಪ್ಪನವರ ಬಗ್ಗೆ ಮಾತನಾಡುವ ನೈತಿಕತೆ ನಿಮಗೇನಿದೆ? ನೀವೇನು ಬಿಜೆಪಿ ಪಕ್ಷ ಕಟ್ಟಿದ್ದೀರಾ? ನೀವು ಮೂಲ ಬಿಜೆಪಿಗರೇ? ಮುಖ್ಯಮಂತ್ರಿ ಯಾರಾಗಬೇಕೆಂದು ನಿರ್ಧರಿಸುವುದು ನೀವಲ್ಲ, ಪಕ್ಷದ ವರಿಷ್ಠರು. ಶಾಸಕರೆಲ್ಲರೂ ಸೇರಿ ಮುಖ್ಯಮಂತ್ರಿ ಆಯ್ಕೆ ಮಾಡುವುದು' ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ, ನಾಯಕತ್ವ ಬದಲಾವಣೆ ಹೇಳಿಕೆ ನೀಡಿದ ಎಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.

ಗುರುವಾರ ಶಾಸಕರೊಂದಿಗೆ ಸಿಎಂ ಭೇಟಿ ಮಾಡಿ ಸಮಾಲೋಚನೆ ನಡೆದ ಬಳಿಕ ಮಾತನಾಡಿದ ರೇಣುಕಾಚಾರ್ಯ, `ಬಿಎಸ್‍ವೈ ಅವರಿಗೆ ವಯಸ್ಸಾಗಿದ್ದರೂ, ಅವರ ಮನಸ್ಸು ಯುವಕರಂತಿದೆ. ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ನೀವು ಕಾಂಗ್ರೆಸ್‍ನಲ್ಲಿ ಸಚಿವರಾಗಿದ್ದಾಗ ಎಸ್ಸೆಂ ಕೃಷ್ಣ ವಿರುದ್ಧ ಏನು ಆರೋಪ ಮಾಡಿದ್ದೀರಿ? ಸಿದ್ದರಾಮಯ್ಯ ವಿರುದ್ಧ ಏನು ಮಾತನಾಡಿದ್ದೀರಿ? ಎಲ್ಲ ಸ್ಥಾನ ಕೊಟ್ಟರೂ ಆ ಪಕ್ಷದಿಂದ ಹೊರಗೆ ಬಂದಿದ್ದೀರಿ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರೂ ದೇವೇಗೌಡರಿಗೆ ಮೋಸ ಮಾಡಿ, ಬಿಜೆಪಿಗೆ ಬಂದಿದ್ದೀರಿ. ಇದೀಗ ಯಡಿಯೂರಪ್ಪ ವಿರುದ್ಧವೂ ಮಾತನಾಡುತ್ತಿದ್ದೀರಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಉಪಚುನಾವಣೆಯಲ್ಲಿ ನಿಲ್ಲಬೇಡಿ ಎಂದರೂ ನಿಂತು ಸೋಲು ಕಂಡಿರಿ. ಮೇಲ್ಮನೆ ಸ್ಥಾನ ನೀಡಲಾಯಿತು. ನ್ಯಾಯಾಲಯದ ಆದೇಶದ ಕಾರಣ ನಿಮಗೆ ಮಂತ್ರಿ ಸ್ಥಾನ ನೀಡಲಿಲ್ಲ. ಆ ಹತಾಶೆಯಿಂದ ಸಿಎಂ ವಿರುದ್ಧ ನೀವು ಮಾತನಾಡುವುದು ಸರಿಯಲ್ಲ' ಎಂದು ಆಕ್ಷೇಪಿಸಿದ ರೇಣುಕಾಚಾರ್ಯ, ಕೆಲವರು ತಿರುಕನ ಕನಸು ಕಾಣುತ್ತಿದ್ದು, ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ವರಿಷ್ಠರು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಮಾನಸಿಕ ಅಸ್ವಸ್ಥ: `ಮೇಲ್ಮನೆ ಸದಸ್ಯ ಎಚ್.ವಿಶ್ವನಾಥ್ ಒಬ್ಬ ಮಾನಸಿಕ ಅಸ್ವಸ್ಥ. ಅವರನ್ನು ಮೊದಲು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಬೇಕು. ಉಂಡ ಮನೆಗೆ ದ್ರೋಹ ಬಗೆಯುವ ಬುದ್ದಿ ಅವರದ್ದು. ರಸ್ತೆಯಲ್ಲಿ ತಿರುಗಾಡುವ ಅರೆ ಹುಚ್ಚನ ರೀತಿಯಲ್ಲಿ ವಿಶ್ವನಾಥ್ ಸ್ಥಿಮಿತ ಕಳೆದುಕೊಂಡಿದ್ದಾರೆ' ಎಂದು ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಯಲಹಂಕ ಕ್ಷೇತ್ರದ ಶಾಸಕ ಎಸ್. ಆರ್.ವಿಶ್ವನಾಥ್ ಟೀಕಿಸಿದ್ದಾರೆ.

ಇವರದ್ದು ಹುಚ್ಚಾಟ: ''ಬಿಜೆಪಿಗೆ ಒಬ್ಬ ವಿಶ್ವನಾಥ್ ಸಾಕಾಗಿತ್ತು, ಆದರೆ, ಏನ್ ಮಾಡುವುದು ಬೇರೆಯವರ ಜೊತೆ ಬಂದಾಗ ಬೇಡ ಅನ್ನುವುದಕ್ಕೆ ಆಗುವುದಿಲ್ಲ. ಹೀಗಾಗಿ, ಅವರನ್ನು ಪಕ್ಷಕ್ಕೆ ಕರೆದುಕೊಂಡು ತಪ್ಪು ಮಾಡಿದ್ದೇವೆ. ಎಚ್.ವಿಶ್ವನಾಥ್ ಅವರಿಗೆ ಅರಳು-ಮರಳು. ಅವರ ಮನಸ್ಥಿತಿ ಸರಿ ಇಲ್ಲ. ಅವರಿಗೆ ಒಂದು ಗುಣ ಇದೆ, `ಇದ್ದ ಮನೆಯಲ್ಲಿ ಮದ್ದರೆಯೋದು', ಇವರದ್ದು ಹುಚ್ಚಾಟ'' ಎಂದು ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ವಾಗ್ದಾಳಿ ನಡೆಸಿದರು.

ಹತಾಶ ಹೇಳಿಕೆ: `ನಾಯಕತ್ವ ಬದಲಾವಣೆ ಕುರಿತು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹತಾಶೆಯಿಂದ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಿಶ್ವನಾಥ್ ಅವರು ಬಿಜೆಪಿ ಕಾರ್ಯಾಲಯಕ್ಕೆ ಬಂದು ಸರಕಾರ ಹಾಗೂ ಪಕ್ಷಕ್ಕೆ ಮುಜುಗರ ಆಗುವ ಹೇಳಿಕೆ ನೀಡಿರುವುದು ಖಂಡನೀಯ. ವಿಶ್ವನಾಥ್ ಅವರು ಬಿಜೆಪಿಯ ರೀತಿ ನೀತಿ ತಿಳಿದುಕೊಳ್ಳವ ಅವಶ್ಯಕತೆ ಇದೆ. ಇದು ಅವರ ವ್ಯಕ್ತಿಗತ ಹೇಳಿಕೆ ಆಗಿದೆ. ಬಿಎಸ್‍ವೈ ಬಗ್ಗೆ ಕೊಟ್ಟ ಹೇಳಿಕೆಯನ್ನು ಪಕ್ಷ ತಿರಸ್ಕರಿಸುತ್ತದೆ' ಎಂದು ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.

ಎಚ್.ವಿಶ್ವನಾಥ್ ಹೇಳಿಕೆ ಕುರಿತು ರಾಜ್ಯಾಧ್ಯಕ್ಷ ಹಾಗೂ ಉಸ್ತುವಾರಿ ಅರುಣ್ ಸಿಂಗ್ ಗಮನಕ್ಕೆ ತರಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲು ಕೋರಲಾಗುವುದು ಎಂದ ಅವರು, ಶಾಸಕ ಅರವಿಂದ ಬೆಲ್ಲದ್ ಅವರ ಟೆಲಿಫೋನ್ ಕದ್ದಾಲಿಕೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಪಕ್ಷದ ವಿರುದ್ಧ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಈಗಾಗಲೇ ವರಿಷ್ಠರು ಸೂಚನೆ ನೀಡಿದ್ದಾರೆ' ಎಂದು ರವಿಕುಮಾರ್ ಬಿಜೆಪಿ ಕಚೇರಿಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News