ಪಕ್ಷದಲ್ಲಿ ಯಾವುದೇ ಗೊಂದಲಗಳು ಬೇಡ: ಶಾಸಕರಿಗೆ ಸಿ.ಟಿ.ರವಿ ಕಿವಿಮಾತು

Update: 2021-06-17 15:05 GMT

ಬೆಂಗಳೂರು, ಜೂ. 17: `ಕೇಂದ್ರ ಸರಕಾರದ ಸಹಕಾರದಿಂದ ನಾವೆಲ್ಲರೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಗೊಂದಲಗಳು ಬೇಡ. ಅದರಿಂದ ವಿರೋಧಿಗಳಿಗೆ ಅವಕಾಶವನ್ನು ಮಾಡಿಕೊಡುತ್ತದೆ. ಅಂತಹ ಕೆಲಸವನ್ನು ಯಾರೂ ಮಾಡಿಕೊಡಬೇಡಿ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇಂದಿಲ್ಲಿ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.

ಗುರುವಾರ ಇಲ್ಲಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ `ಜಗನ್ನಾಥ ಭವನ'ದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಉಪಸ್ಥಿತಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಾಲನ್ನು ಹಾಲಿನ ಜೊತೆ ಸೇರಿಸಿದಾಗ ಎಲ್ಲ ಹಾಲು ಒಂದೇ. ಅವರೆಲ್ಲರೂ ಬಂದ ಕಾರಣ ನಮಗೆ ಬಹುಮತ ಲಭಿಸಿದೆ. ಅದೂ ನಿಜವೇ ಆಗಿದೆ. 104 ಶಾಸಕರನ್ನು ಬಿಜೆಪಿ ಚಿಹ್ನೆಯಡಿ ಜನರು ಗೆಲ್ಲಿಸಿದ್ದೂ ಸತ್ಯ. 104ಕ್ಕೆ 17 ಸೇರಿದ್ದರಿಂದ 121 ಆಗಿ ಬಹುಮತ ಲಭಿಸಿದೆ. ಆ 17 ಜನರೂ ನಮ್ಮವರೇ. ಅವರನ್ನು ಬೇರೆಯವರೆಂದು ಪರಿಗಣಿಸುವ ಪ್ರಶ್ನೆಯೇ ಇಲ್ಲ. ಸ್ವಂತಕ್ಕಾಗಿ-ಸ್ವಾರ್ಥಕ್ಕಾಗಿ ಅಧಿಕಾರ ಅಲ್ಲ. ಸೇವೆಗಾಗಿ ಅಧಿಕಾರವನ್ನು ಬಳಸಿ ನಾವು ಮತ್ತೆ ಗೆಲುವು ಸಾಧಿಸಬೇಕು' ಎಂದು ಹೇಳಿದರು.

ಎಷ್ಟೋ ಜನರ ಪ್ರಯತ್ನದ ಫಲವಾಗಿ ಪಕ್ಷ ಬೆಳೆದುಬಂದಿದೆ. ಏರಿಳಿತ ಬಂದಾಗಲೂ ಪಕ್ಷ ಅದನ್ನು ಎದುರಿಸಿ ಇನ್ನಷ್ಟು ದೃಢವಾಗಿ ಬೆಳೆದುಬಂದಿದೆ. ಪಕ್ಷ ದುರ್ಬಲ ಆಗಲು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪಕ್ಷ ಬೆಳೆಯುವ ಸಂದರ್ಭದಲ್ಲಿ ರಾಜಕೀಯ ಧ್ರುವೀಕರಣ ಆಗುವುದೂ ಸಹಜ. ಕಾರ್ಯಕರ್ತರು ನೊಂದುಕೊಳ್ಳದ ರೀತಿಯಲ್ಲಿ ಪಕ್ಷದ ನಾಯಕರು ನಡೆದುಕೊಳ್ಳಬೇಕು. ಆ ರೀತಿಯ ಸೂಚನೆಯನ್ನು ಈಗಾಗಲೇ ಅರುಣ್ ಸಿಂಗ್ ಅವರು ಕೊಟ್ಟಿದ್ದಾರೆ. ನಮ್ಮ ಲಕ್ಷ್ಯ ಜನರ ಹಿತದ ಕಡೆ ಇರಬೇಕು' ಎಂದು ಸಿ.ಟಿ.ರವಿ ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅತ್ಯುತ್ತಮವಾಗಿ ಪ್ರಯತ್ನ ಮಾಡಿದ್ದರಿಂದ ಕೋವಿಡ್ ಪೀಡಿತರ ಸಂಖ್ಯೆ ಕಡಿಮೆಯಾಗಿದೆ. ಸರಕಾರಗಳು ಜನಹಿತವನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂಬುದನ್ನು ಅರುಣ್ ಸಿಂಗ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಏನೇ ನಿರ್ಣಯಗಳಿದ್ದರೂ ಪಕ್ಷದ ಸಂಸದೀಯ ಮಂಡಳಿ ಕೈಗೊಳ್ಳುತ್ತದೆ' ಎಂದು ರವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News