ಕೊಡಗಿನಲ್ಲಿ ಧಾರಾಕಾರ ಮಳೆ: ಮನೆ, ವಿದ್ಯುತ್ ಕಂಬಗಳಿಗೆ ಹಾನಿ; ಧರೆಗುರುಳಿದ ಮರಗಳು

Update: 2021-06-17 15:09 GMT

ಮಡಿಕೇರಿ, ಜೂ.17: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ಒಂದು ವಾರದಿಂದ ಬಿಡುವಿಲ್ಲದೆ ವ್ಯಾಪಕ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತ ಉಂಟಾಗಿದೆ. ‘ಮುಂಗಾರು’ ಅಬ್ಬರ ಜೋರಾಗಿರುವುದರಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಮನೆ, ವಿದ್ಯುತ್ ಮಾರ್ಗಕ್ಕೆ ಮರ ಬಿದ್ದು ಹಾನಿಯಾಗಿದೆ. 

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಜೂನ್ ಎರಡನೇ ಮತ್ತು ಮೂರನೇ ವಾರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಇದೇ ರೀತಿ ಮಳೆ ಮುಂದುವರಿದರೆ ನದಿಗಳಲ್ಲಿ ಪ್ರವಾಹ ಏರ್ಪಡುವ ಸಾಧ್ಯತೆಗಳಿದೆ. ನದಿ, ತೊರೆ, ಕಾಲುವೆ, ಹಳ್ಳ, ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಜಲಪಾತಗಳು ಬೋರ್ಗರೆಯುತ್ತಿದ್ದು, ಕಣ್ಮನ ಸೆಳೆಯುತ್ತಿದೆ.  

ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದ ಮೆಟ್ಟಿಲುಗಳು ಮುಳುಗಿವೆ. ಮಳೆ ಮುಂದುರೆದಿದ್ದು, ಭಾಗಮಂಡಲ ರಸ್ತೆ ಜಲಾವೃತಗೊಳ್ಳುವ ಸಾಧ್ಯತೆಗಳಿದೆ.

ಸೋಮವಾರಪೇಟೆ ಮತ್ತು ವಿರಾಜಪೇಟೆ ಭಾಗದಲ್ಲೂ ಉತ್ತಮ ಮಳೆಯಾಗುತ್ತಿದ್ದು, ಕೆಲವು ಕಡೆ ಹಾನಿ ಸಂಭವಿಸಿದೆ. ಜಿಲ್ಲೆಯ ಹಲವೆಡೆ ವಿದ್ಯುತ್ ಕಂಬ ಮತ್ತು ಮರ ಮುರಿದು ಬಿದ್ದಿದೆ. ವಿರಾಜಪೇಟೆ ವಿಭಾಗದ ಚೆನ್ನಂಗೊಲ್ಲಿ-ಮಾಯಾಮುಡಿ ರಸ್ತೆ ಮಾರ್ಗದಲ್ಲಿ ಗಾಳಿ, ಮಳೆಗೆ ಮರಗಳು ಬಿದ್ದ ಘಟನೆ ನಡೆಯಿತು. 

ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ಇರುವ ಜಿಲ್ಲಾಧಿಕಾರಿ ಅವರ ಸರ್ಕಾರಿ ವಸತಿ ಗೃಹದ ಬಳಿ ಮರ ಬಿದ್ದಿದೆ. ಮಾದಾಪುರ ಬಳಿ ಮಳೆ, ಗಾಳಿಯಿಂದ ವಿದ್ಯುತ್ ಕಂಬಕ್ಕೆ ಬಿದ್ದಿದ್ದ ಮರಗಳನ್ನು ಸೆಸ್ಕ್ ಸಿಬ್ಬಂದಿ ತೆರವುಗೊಳಿಸಿದರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಕೀರೆಹೊಳೆ, ಬಿರುನಾಣಿ ಬಳಿಯ ನೀಟ್ ಕುಂದ್, ಟಿ.ಶೆಟ್ಟಿಗೇರಿಯ ನಾಲ್ಕೇರಿ ಸೇತುವೆ ಮತ್ತು ಬಾಳೆಲೆಯ ಸುಳುಗೋಡು ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಅತಿವೃಷ್ಟಿಯಿಂದ ಬಾಧಿತವಾಗುವ ಸ್ಥಳಗಳನ್ನು ವೀಕ್ಷಿಸಿದರು. ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ನಿರ್ದೇಶನ ನೀಡಿದರು. 

ಉಪ ವಿಭಾಗಾಧಿಕಾರಿ, ವಿರಾಜಪೇಟೆ ತಹಶಿಲ್ದಾರರಾದ ಯೋಗಾನಂದ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಮತ್ತು ಕಂದಾಯ ಇಲಾಖಾ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.

ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದಲ್ಲಿ ಮಳೆ, ಗಾಳಿಯಿಂದ ವಾಸದ ಮನೆ ಹಾನಿಯಾಗಿರುವುದನ್ನು ಸಂಬಂಧಿಸಿದ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಿಗರು ಪರಿಶೀಲಿಸಿದರು.

ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು, ಸುಮುತ್ತಲ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಆಯಾ ಗ್ರಾ.ಪಂ ಗಳು ಸೂಚನೆ ನೀಡಿವೆ. ಎತ್ತರದ ಪ್ರದೇಶಗಳ ನಿವಾಸಿಗಳಿಗೂ ಮುನ್ನೆಚ್ಚರಿಕೆ ವಹಿಸಲು ತಿಳಿಸಲಾಗಿದೆ. ಎನ್‍ಡಿಆರ್‍ಎಫ್ ತಂಡ ಮಳೆಯ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದ್ದು, ಸಾರ್ವಜನಿಕರು ಕೂಡ ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

ಮಳೆ ವಿವರ: ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 65.90 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 93.53 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 63.68 ಮಿ.ಮೀ. ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 40.5 ಮಿ.ಮೀ. ಮಳೆಯಾಗಿದೆ.  

ಹಾರಂಗಿ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2831.57 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 10.8. ಇಂದಿನ ನೀರಿನ ಒಳಹರಿವು 1411 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 40 ಕ್ಯುಸೆಕ್. ನಾಲೆಗೆ 40 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು 80 ಕ್ಯುಸೆಕ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News