ಬಿಎಸ್‍ವೈ ಇಲ್ಲದಿದ್ದರೆ ಬಿಜೆಪಿ ವೆಂಟಿಲೇಟರ್ ನಲ್ಲಿ ಇರಬೇಕಾಗುತ್ತದೆ: ವೀರಶೈವ ಮಠಾಧೀಶರ ಎಚ್ಚರಿಕೆ

Update: 2021-06-17 16:01 GMT

ಬಳ್ಳಾರಿ, ಜೂ. 17: `ಯಡಿಯೂರಪ್ಪನವರಿಗೆ ವಯಸ್ಸಾಗಿರುವುದರಿಂದ ಅವರು ಅಧಿಕಾರ ಬಿಡಬೇಕೆಂದು ಕೆಲವು ನಾಯಕರು ಈಗ ಹೇಳುತ್ತಿದ್ದಾರೆ. ಆದರೆ, ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ವೇಳೆ ಅವರಿಗೆ ಹಲ್ಲು ಹೋಗಿ, ಬೆನ್ನು ಬಾಗಿರುವುದು ಗೊತ್ತರಲಿಲ್ಲವೇ? ಯಡಿಯೂರಪ್ಪ ಅವರು ಮುಖ್ಯಮಂತ್ರಿ ಅವಧಿ ಪೂರ್ಣಗೊಳ್ಳುವವರೆಗೆ ಮುಂದುವರಿಸಬೇಕು' ಎಂದು ವೀರಶೈವ ಮಠಾಧೀಶರ ಧರ್ಮ ಪರಿಷತ್ತಿನ ಸ್ವಾಮೀಜಿಗಳು ಆಗ್ರಹಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 15ಕ್ಕೂ ಹೆಚ್ಚು ಸ್ವಾಮೀಜಿಗಳು, `ಮುಂದಿನ ಎರಡು ವರ್ಷ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಗಳಾಗಿ ಮುಂದುವರಿಸಬೇಕು. ನಾಯಕತ್ವ ಬದಲಾವಣೆ ವಿಚಾರ ಕೈಬಿಡಬೇಕು. ಬಿಎಸ್‍ವೈ ಅವರು ಬಿಜೆಪಿ ಪಕ್ಷಕ್ಕೆ ಆಮ್ಲಜನಕವಿದ್ದಂತೆ. ಅವರಿಲ್ಲದೆ ಹೋದರೆ ಪಕ್ಷ ವೆಂಟಿಲೇಟರ್ ನಲ್ಲಿ ಇರಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರನ್ನು ಮುಂದುವರಿಸಬೇಕು ಎಂಬುದು ಲಿಂಗಾಯತ ವೀರಶೈವ ಸಮುದಾಯದ ಅಭಿಪ್ರಾಯ. ಹೀಗಾಗಿಯೇ ನಾವು ಸಮಾಜದ ಮುಖವಾಣಿಯಾಗಿ ಹೇಳುತ್ತಿದ್ದೇವೆ. ರಾಜಕಾರಣಿಗಳು ದಾರಿ ತಪ್ಪಿದಾಗ ಸನ್ಮಾರ್ಗದಲ್ಲಿ ನಡೆಯಿರಿ ಎಂದು ಸಂದೇಶ ನೀಡುವುದು ಸ್ವಾಮೀಜಿಗಳ ಜವಾಬ್ದಾರಿ. ಯಡಿಯೂರಪ್ಪ ಯುವಕರಂತೆ ಓಡಾಡಿ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಯಾವುದೇ ಬೆಲ್ಲ, ಸಕ್ಕರೆ ಹಾಗೂ ಇತರೆ ಶಕ್ತಿ ಅವರಿಗೆ ಏನು ಮಾಡಲಾಗದು' ಎಂದು ಸ್ವಾಮೀಜಿಗಳು ಭಿನ್ನ ಶಾಸಕರಿಗೆ ಎಚ್ಚರಿಸಿದರು.

ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಸ್ವಾಮಿ, ಎಮ್ಮಿಗನೂರು ಮಹಾಂತರ ಮಠದ ವಾಮದೇವ ಮಹಾಂತ ಶಿವಾಚಾರ್ಯ, ಕಲ್ಯಾಣ ಸ್ವಾಮಿ ಮಠದ ಕಲ್ಯಾಣ ಸ್ವಾಮಿ, ಹಿರೇಹಡಗಲಿ ಅಭಿನವ ಹಾಲಸ್ವಾಮಿ, ಜಗಳೂರು ತಾಲೂಕು ಮುಸ್ಟೂರಿ ರುದ್ರಮುನಿ ಶಿವಾಚಾರ್ಯ, ಬುಕ್ಕಸಾಗರ ಮಠದ ವಿಶ್ವಾರಾಧ್ಯ ಶಿವಾಚಾರ್ಯ, ಹರಗಿನಡೋಣಿಯ ಪಂಚವಣಗಿ ಮಠದ ಸಿದ್ದಲಿಂಗ ಸ್ವಾಮಿ, ಹಳೆಕೋಟೆ ಮರಿಸಿದ್ದ ಬಸವಸ್ವಾಮಿ, ನಂದಿಪುರದ ಮಹೇಶ್ವರ ಸ್ವಾಮಿ ಸೇರಿದಂತೆ ವಿವಿಧ ಮಠಾಧಿಪತಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News