ಹಣ ಪಡೆದು ಆಸ್ತಿ ವರ್ಗಾವಣೆ ಮಾಡಿದ್ದರೆ ಹಿರಿಯ ನಾಗರಿಕರ ಕಾಯ್ದೆ ಸೆಕ್ಷನ್-23 ಅನ್ವಯಿಸದು: ಹೈಕೋರ್ಟ್

Update: 2021-06-17 15:20 GMT

ಬೆಂಗಳೂರು, ಜೂ.17: ಹಣ ಪಡೆದು ಆಸ್ತಿ ವರ್ಗಾವಣೆ ಮಾಡಿದ ಬಳಿಕ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ-2007ರ ಸೆಕ್ಷನ್ 23ರ ಅಡಿ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. 

ಆಸ್ತಿ ವರ್ಗಾವಣೆ ಮಾಡಿದ ಬಳಿಕ ಅದನ್ನು ಹಿರಿಯ ನಾಗರಿಕರ ಕಾಯ್ದೆ ಅಡಿ ರದ್ದುಪಡಿಸಿ ಉಪವಿಭಾಗಾಧಿಕಾರಿ ನೀಡಿರುವ ಆದೇಶವನ್ನು ಅನೂರ್ಜಿತಗೊಳಿಸುವಂತೆ ಕೋರಿ ಧಾರವಾಡದ ವೈದ್ಯ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.

ಅರ್ಜಿದಾರರಿಗೆ ಆಸ್ತಿಯನ್ನು ಕೇವಲ ಉಡುಗೊರೆ ರೂಪದಲ್ಲಿ ವರ್ಗಾಯಿಸಿಲ್ಲ. ಆಸ್ತಿ ವರ್ಗಾವಣೆ ವೇಳೆ ಮಾಲಕರಾದ ಪ್ರತಿವಾದಿ ಮಹಿಳೆಗೆ 8.30 ಲಕ್ಷ ರೂ. ಹಾಗೂ ಅವರ ಸೋದರಿಗೆ 1.30 ಲಕ್ಷ ರೂ. ನೀಡಿದ್ದಾರೆ. ಇನ್ನು ಆಸ್ತಿ ವರ್ಗಾವಣೆ ವೇಳೆ ಆಸ್ತಿಯ ಮಾಲಕಿಯಾಗಿದ್ದ ಮಹಿಳೆಯನ್ನು ಆರೈಕೆ ಮಾಡುವ ಕುರಿತಂತೆ ಷರತ್ತು ಕೂಡ ಉಲ್ಲೇಖಿಸಿಲ್ಲ. ಹೀಗಾಗಿ, ಉಪವಿಭಾಗಾಧಿಕಾರಿ ಆಸ್ತಿ ವರ್ಗಾವಣೆಯನ್ನು ಹಿರಿಯ ನಾಗರಿಕರ ಕಾಯ್ದೆ ಸೆಕ್ಷನ್ 23ರ ಪ್ರಕಾರ ರದ್ದು ಮಾಡಿರುವ ಆದೇಶ ಕಾನೂನು ಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟು, ಎಸಿ ಆದೇಶವನ್ನು ರದ್ದು ಮಾಡಿದೆ. ಇದೇ ವೇಳೆ ಮಹಿಳೆಯು ತನ್ನ ಹಕ್ಕುಗಳಿಗಾಗಿ ಸಿವಿಲ್ ಕೋರ್ಟ್‍ನಲ್ಲಿ ದಾವೆ ಹೂಡಲು ಈ ಆದೇಶ ಅಡ್ಡಿಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಧಾರವಾಡದ ನಿವಾಸಿಯಾಗಿರುವ ಸುಮಾ ಹಾಲೆಮನಿ ಅವರು ತಮ್ಮ ಪುತ್ರ ಶ್ರೀಹರ್ಷ ಹಾಗೂ ಸೊಸೆ ಅನುಪಮಾಗೆ ನಗರದ ಮಹಿಶಿ ರಸ್ತೆಯಲ್ಲಿರುವ ನಿವೇಶನವನ್ನು 2018 ಜುಲೈನಲ್ಲಿ ವರ್ಗಾವಣೆ ಮಾಡಿದ್ದರು. ಇದಕ್ಕೆ ಸುಮಾ ಹಾಗೂ ಅವರ ಸೋದರಿ ಅನುಕ್ರಮವಾಗಿ 8.30 ಲಕ್ಷ ಹಾಗೂ 1.30 ಲಕ್ಷ ಹಣ ಪಡೆದಿದ್ದರು. ಆ ಬಳಿಕ ತಮ್ಮ ಆರೈಕೆ ಮಾಡುತ್ತಿಲ್ಲವೆಂದು ಆರೋಪಿಸಿದ್ದ ಸುಮಾ ಧಾರವಾಡದ ಉಪವಿಭಾಗಾಧಿಕಾರಿಗೆ ದೂರು ನೀಡಿ, ಆಸ್ತಿ ವರ್ಗಾವಣೆ ರದ್ದು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News