ಸಂತೋಷ್ ಹೆಗ್ಡೆಗೂ ಸೈಬರ್ ವಂಚಕರ ಕರೆ: ಪ್ರಕರಣ ದಾಖಲು

Update: 2021-06-17 16:44 GMT

ಬೆಂಗಳೂರು, ಜೂ.17: ದಿನೇ ದಿನೇ ಸೈಬರ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದರ ನಡುವೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಗೂ ವಂಚಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.

ದೂರವಾಣಿ ಕರೆ ಮಾಡಿ ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದು ವಂಚನೆ ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಈ ಸಂಬಂಧ ಸ್ವತಃ ಸಂತೋಷ್ ಹೆಗ್ಡೆ ಅವರು ದೂರು ನೀಡಿದ್ದಾರೆ.

ದೂರು ಏನು?: ಜೂ.14ರ ಸಂಜೆ 6 ಗಂಟೆಗೆ ಸಂತೋಷ್ ಹೆಗ್ಡೆ ಅವರ ಮೊಬೈಲ್‍ಗೆ ಕರೆ ಮಾಡಿದ ಅಪರಿಚಿತ ಮಹಿಳೆ, ನಿಮ್ಮ ಕ್ರೆಡಿಟ್ ಕಾರ್ಡ್‍ಗೆ ರಿವಾರ್ಡ್ ಪಾಯಿಂಟ್ ಬಂದಿವೆ. ಅದರ ಅವಧಿ ಮುಕ್ತಾಯವಾಗುತ್ತಿವೆ ಎಂದು ಹೇಳಿದ್ದಾಳೆ.

ಅನುಮಾನ ಬಂದು ಸಂತೋಷ್ ಹೆಗ್ಡೆ ಅವರು ಕರೆ ಸ್ಥಗಿತಗೊಳಿಸಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಅವರ ಮೊಬೈಲ್‍ಗೆ ಎರಡು ಒಟಿಪಿಗಳು ಬಂದಿವೆ. ಆಗ ಇದು ವಂಚಕರ ಕರೆ ಎಂಬುದು ಖಚಿತವಾಗಿದೆ. ಒಟಿಪಿ ಸಂಖ್ಯೆಯನ್ನು ಅವರು ಹಂಚಿಕೊಂಡಿಲ್ಲ. ಬದಲಿಗೆ ದೂರು ನೀಡಿದ್ದಾರೆ.

ಕರೆ ಮಾಡಿ ವಂಚನೆ ಮಾಡಲು ಯತ್ನಿಸಿದ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಸಂತೋಷ್ ಹೆಗ್ಡೆ ಮನವಿ ಮಾಡಿದ್ದಾರೆ. ಇನ್ನು, ಕರೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕೇಂದ್ರ ವಿಭಾಗದ ಸಿಇಎನ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News