ಸಾಗರದಲ್ಲಿ ಕಚ್ಚಾಬಾಂಬ್ ಸ್ಫೋಟಕ್ಕೆ ಹೊಸ ತಿರುವು: ಆಸ್ತಿ ವಿಚಾರವಾಗಿ ಕುಟುಂಬದ ಕೊಲೆಗೆ ಸಂಚು; ಸಂತ್ರಸ್ತರ ಆರೋಪ

Update: 2021-06-17 16:47 GMT

ಶಿವಮೊಗ್ಗ, ಜೂ.17: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗೌತಮಪುರ ಸಮೀಪದ ಕಣ್ಣೂರಿನ ಕೆರಿಯಪ್ಪ ಅವರ ಮನೆಯ ಬಚ್ಚಲು ಮನೆಯಲ್ಲಿ ಸಂಭವಿಸಿದ್ದ ಕಚ್ಚಾ ಬಾಂಬ್ ಸ್ಫೋಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಆಸ್ತಿಯ ವಿಚಾರವಾಗಿ ಕುಟುಂಬವನ್ನೇ ಕೊಲೆ ಗೈಯ್ಯುವ ಹುನ್ನಾರ ಅಡಗಿದೆ ಎಂದು ಕೆರಿಯಪ್ಪ ಅವರ ಕುಟುಂಬ ಆರೋಪಿಸಿದೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಕೆರಿಯಪ್ಪ ಅವರ ಕಿರಿಯ ಮಗ ರವಿ, ತಂದೆಯ ಆಸ್ತಿ ಇಬ್ಭಾಗ ಮಾಡುವ ವಿಚಾರದಲ್ಲಿ ನನ್ನ ಹಿರಿಯಣ್ಣ, ತಂದೆ-ತಾಯಿ ಸಹೋದರಿಯರು ಮತ್ತು ನನ್ನ ಮೇಲೆ ದೌರ್ಜನ್ಯ ನಡೆಸಿ, ಚಿತ್ರ ಹಿಂಸೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಬಾರಿ ಸ್ಥಳೀಯವಾಗಿ ಸಾಕಷ್ಟು ಪಂಚಾಯಿತಿ ನಡೆದಿದ್ದರೂ ಬಗೆಹರಿದಿರಲಿಲ್ಲ. ಸುಮಾರು 12 ಎಕರೆ ನೀರಾವರಿ ಭೂಮಿ ಇದ್ದರೂ ಸಾಗುವಳಿ ಮಾಡದೆ ಹಾಳು ಬಿಡಲಾಗಿದೆ. ಹಿರಿಯ ಸಹೋದರ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಜಮೀನು ಸಾಗುವಳಿ ಮಾಡಲು ಬಿಡುತ್ತಿಲ್ಲ ಎಂದು ಕೊಲೆಗೆ ಹಿರಿಯಣ್ಣ ಸಂಚು ರೂಪಿಸಿರುವ ಸಾಧ್ಯತೆ ಇದೆ ಎಂದು ರವಿ ಆರೋಪಿಸಿದ್ದಾರೆ.

ಈ ಪ್ರಕರಣದಕಲ್ಲಿ ಆಸ್ತಿ ವಿಚಾರವಾಗಿ ನಮ್ಮ ಕುಟುಂಬವನ್ನೇ ಕೊಲೆ ಮಾಡುವ ಸಂಚು ಅಡಗಿದೆ ಎಂದು ಕೆರಿಯಪ್ಪ ಅವರ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಜೂ.12ರಂದು ಕಣ್ಣೂರು ಗ್ರಾಮದ ಕೆರಿಯಪ್ಪ ಅವರ ಮನೆಯ ಬಚ್ಚಲು ಮನೆಯಲ್ಲಿ ನಾಡ ಬಾಂಬ್‌ಗಳು ಸ್ಫೋಟಗೊಂಡಿದ್ದವು. ಅಲ್ಲದೆ, ಮನೆ ಸಮೀಪದ ತೆಂಗಿನ ಮರದ ಅಡಿಯಲ್ಲಿ 5 ಸಜೀವ ಕಚ್ಚಾ ಬಾಂಬ್‌ಗಳು ಪತ್ತೆಯಾಗಿದ್ದವು.

ಕರಿಯಪ್ಪ ಸಾಕಷ್ಟು ಕಷ್ಟಪಟ್ಟು ಆಸ್ತಿ ಮಾಡಿದ್ದು, ಮಕ್ಕಳ ಕಾಲದಲ್ಲಿ ಆ ಭೂಮಿಗಾಗಿ ಸಂಘರ್ಷ ನಡೆಯುತ್ತಿದೆ. ಈ ಕಾರಣಕ್ಕಾಗಿ ಭೂಮಿ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿದೆ. ಈ ಆಸ್ತಿ ವ್ಯಾಜ್ಯ ಹಾಗೂ ಕೌಟುಂಬಿಕ ಕಲಹದ ಕಾರಣಕ್ಕಾಗಿ ಒಟ್ಟು ಆರು ಪ್ರಕರಣಗಳು ದಾಖಲಾಗಿದ್ದು, ತಮ್ಮ ಕುಟುಂಬದ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತು ಒಟ್ಟು 7 ಸಲ ಎಸ್ಪಿಯವರಿಗೆ ದೂರು ನೀಡಿದ್ದೇವೆ. 2 ಸಲ ಐಜಿಗೆ ದೂರು ನೀಡಿದ್ದೇವೆ. ಆದಾಗ್ಯೂ ನಾವು ನಿರಂತರ ಕಿರುಕುಳ ಅನುಭವಿಸುತ್ತಿದ್ದೇವೆ.
-ರವಿ, ಕೆರಿಯಪ್ಪ ಅವರ ಕಿರಿಯ ಮಗ

ವೈಯಕ್ತಿಕ ದ್ವೇಷ ಕಾರಣ ?
ಎರಡು ವರ್ಷಗಳ ಹಿಂದೆ ಕೆರಿಯಪ್ಪರ ಕೊಟ್ಟಿಗೆ ಅಟ್ಟದ ಮೇಲೆ ಜಿಂಕೆ ಚರ್ಮ, ಕೊಂಬು ಪತ್ತೆಯಾಗಿದ್ದವು. 2 ಸಿಮೆಂಟ್ ಚೀಲದಲ್ಲಿ ವನ್ಯಜೀವಿಯ ಅಂಗಾಂಗ ತಂದಿಟ್ಟು ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ವಶಕ್ಕೆ ಪಡೆದಿದ್ದರು. ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗಿತ್ತು ಎಂದು ಮೇಲ್ಕೋಟಕ್ಕೆ ಸಾಬೀತಾಗಿತ್ತು.

ಕೋವಿಡ್ ಆಸ್ಪತ್ರೆಯಲ್ಲಿದ್ದವರ ಮೇಲೆ ಎಫ್‌ಐಆರ್
ನಾಡಬಾಂಬ್ ಸ್ಫೋಟ ಪ್ರಕರಣದಲ್ಲಿ ವೃದ್ಧ ಕೆರಿಯಪ್ಪ ಮತ್ತು ರವಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರವಿ ಅವರು ಕೊರೋನ ಸೋಂಕಿತರಾಗಿ 14 ದಿನದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ತಂದೆ ಮಗನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News