ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮುಂದೆ ಸಿ.ಪಿ.ಯೋಗೇಶ್ವರ್ ಅಹವಾಲು

Update: 2021-06-17 17:54 GMT

ಬೆಂಗಳೂರು, ಜೂ. 17: `ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಯಾವುದೇ ಸಂದರ್ಭದಲ್ಲಿಯೂ ಬಹಿರಂಗ ಹೇಳಿಕೆ ನೀಡುವುದಿಲ್ಲ. ಇದು ನಮ್ಮ ಪಕ್ಷದ ಆಂತರಿಕ ವಿಚಾರ, ನನ್ನ ಅಭಿಪ್ರಾಯವನ್ನು ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ತಿಳಿಸಿದ್ದೇನೆ' ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಗುರುವಾರ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, `ನಮ್ಮ ಪಕ್ಷದ ಆಂತರಿಕ ವಿಚಾರ, ನನ್ನ ವಿಚಾರ ಎಲ್ಲವನ್ನೂ ರಾಜ್ಯ ಉಸ್ತುವಾರಿಗಳಾದ ಅರುಣ್ ಸಿಂಗ್ ಮುಂದೆ ಇಟ್ಟಿದ್ದೇನೆ, ನಾನು ಅವರೊಂದಿಗೆ ಏನೇನು ಚರ್ಚೆ ಮಾಡಿದ್ದೇನೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ. ನೀವು ನನ್ನನ್ನು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದೇನೆ' ಎಂದು ಹೇಳಿ ಹೊರಟು ಹೋದರು.

`ಇಲಾಖೆಯಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರ ಹಸ್ತಕ್ಷೇಪ, ಸಿಎಂ ಯಡಿಯೂರಪ್ಪ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ಬೀಳಲಿದೆ. ನಾಯಕತ್ವ ಬದಲಾವಣೆ ಗೊಂದಲ ಹೇಳಿಕೆಗಳಿಂದ ಪಕ್ಷ ಹಾಗೂ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂಬುದು ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಅರುಣ್ ಸಿಂಗ್ ಗಮನಕ್ಕೆ ತಂದಿದ್ದಾರೆ ಎಂದು ಗೊತ್ತಾಗಿದೆ.

`ನಾನು ಸೇರಿ ಬಹುತೇಕ ಸಚಿವರು ಹೆಸರಿಷ್ಟೆ ಇದ್ದೇವೆ. ಆದರೆ, ಇಂಧನ, ಜಲಸಂಪನ್ಮೂಲ, ಹಣಕಾಸು, ಬೆಂಗಳೂರು ನಗರರಾಭಿವೃದ್ಧಿಯಂತಹ ಪ್ರಮುಖ ಖಾತೆಗಳು ಯಡಿಯೂರಪ್ಪನವರ ಬಳಿಯೇ ಇವೇ. ಬಜೆಟ್‍ನ ಶೇ.50ರಷ್ಟು ಹಣ ಇರುವುದು ಮೇಲ್ಕಂಡ ಖಾತೆಗಳಲ್ಲಿ. ಹೀಗಾಗಿ ಇವುಗಳ ನಿರ್ವಹಣೆ ವಿಜಯೇಂದ್ರ ಮಾಡುತ್ತಿದ್ದಾರೆ. ಹೀಗಾಗಿಯೇ ನಾನು ಆಡಳಿತದಲ್ಲಿ ಹಸ್ತಕ್ಷೇಪವಿದೆ' ಎಂದು ಆರೋಪ ಮಾಡಿದ್ದೇನೆಂದು ಸ್ಪಷ್ಟನೆ ನೀಡಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News