ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಡುತ್ತಿರುವ ಚಿಕ್ಕಮಗಳೂರು ಜಿಲ್ಲಾಡಳಿತ: ಆರೋಪ

Update: 2021-06-17 18:06 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಜೂ.17: ಕೋವಿಡ್‍ನಿಂದ ಮೃತಪಟ್ಟವರ ಸಂಖ್ಯೆಯನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಮುಚ್ಚಿಡುತ್ತಿರುವ ಆರೋಪ ಕೇಳಿಬಂದಿದೆ. ವ್ಯಕ್ತಿಯೊಬ್ಬರು ಕೋವಿಡ್ ಆಸ್ಪತ್ರೆಯಲ್ಲಿದ್ದ ಮಹಿಳೆಯೊಂದಿಗೆ ನಡೆಸಿದ ಮೊಬೈಲ್ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೋವಿಡ್‍ನಿಂದ ಜನ ಸಾಯುತ್ತಿದ್ದರೂ ಜಿಲ್ಲಾಡಳಿತ ಸಾವಿನ ನಿಖರ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎಂದು ಜನತೆ ಆರೋಪಿಸುತ್ತಿದ್ದಾರೆ.

ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರಿಗೆ ಇತ್ತೀಚಿಗೆ ಆಕೆಯ ಸಂಬಂಧಿಯೊಬ್ಬರು ಕರೆ ಮಾಡಿದ್ದು, ಈ ವೇಳೆ ಆಸ್ಪತ್ರೆಯಲ್ಲಿದ್ದ ಮಹಿಳೆ ಆಸ್ಪತ್ರೆಯಲ್ಲಿ ತಾನು ಕಂಡಿರುವುದನ್ನು ಮೊಬೈಲ್ ಮೂಲಕ ಹೇಳಿಕೊಂಡಿದ್ದಾರೆ. ಮಹಿಳೆ ಹಾಗೂ ವ್ಯಕ್ತಿಯ ನಡುವೆ ನಡೆದ ಆಡಿಯೋ ಸಂಭಾಷಣೆ ಸದ್ಯ ಜಿಲ್ಲಾದ್ಯಂತ ವೈರಲ್ ಆಗಿದ್ದು, ಮಹಿಳೆಯ ಆರೋಪ ನಿಜವೋ ಸುಳ್ಳೋ ಎಂಬ ಗೊಂದಲ ಮೂಡಿಸಿದೆ.

''ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ಜನರು ಪ್ರಾಣ ಬಿಡುತ್ತಿದ್ದಾರೆ. ಒಂದೇ ದಿನ 8 ಜನ ಸತ್ತಿದ್ದರೂ ಕೇವಲ ಇಬ್ಬರು ಸತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ನೀಡುತ್ತಿದೆ. ನನ್ನ ಕಣ್ಣೆದುರೇ ಮಹಿಳೆಯೊಬ್ಬರು ಆಕ್ಸಿಜನ್ ಇಲ್ಲದೇ ರಕ್ತಕಾರಿಕೊಂಡು ಸತ್ತಿದ್ದಾರೆ. ರೋಗಿಗಳಿಗೆ ಸರಿಯಾಗಿ ಆಕ್ಸಿಜನ್ ಪೂರೈಕೆ ಮಾಡುತ್ತಿಲ್ಲ. ಸೂಕ್ತ ಚಿಕಿತ್ಸೆಯನ್ನು ನೀಡುತ್ತಿಲ್ಲ'' ಎಂದು ಮಹಿಳೆ ಆಡಿಯೋದಲ್ಲಿ ತನ್ನ ಸಂಬಂಧಿ ಬಳಿ ಮಾತನಾಡಿದ್ದಾರೆ.

ಹಣವಿದ್ದವರಿಗೆ ಒಂದು ರೀತಿ ಚಿಕಿತ್ಸೆ ನೀಡುತ್ತಿದ್ದಾರೆ, ಹಣವಿಲ್ಲದವರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ರೋಗಿಗಳ ಸಂಬಂಧಿಕರು ವೈದ್ಯರನ್ನು ಪ್ರಶ್ನಿಸಿದರೆ, ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳಿಸುತ್ತೇವೆಂದು ಬೆದರಿಸುತ್ತಾರೆ. ಸೋಂಕಿತರ ಪಕ್ಕದ ಹಾಸಿಗೆಯಲ್ಲಿ ಐದಾರು ಗಂಟೆ ಮೃತದೇಹವನ್ನು ಹಾಗೆಯೇ ಬಿಟ್ಟಿರುತ್ತಾರೆ. ಮೃತದೇಹವನ್ನು ನೋಡಿಕೊಂಡು ಅಕ್ಕಪಕ್ಕದ ಸೋಂಕಿತರು ಇರಬೇಕು ಎಂದು ಮಹಿಳೆ ತನ್ನ ಸಂಬಂಧಿ ಬಳಿ ಹೇಳಿಕೊಂಡಿದ್ದು, ಆಸ್ಪತ್ರೆಯ ವೈದ್ಯರ ಕಾರ್ಯವೈಖರಿ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದಾರೆ.

ಜಿಲ್ಲಾ ಕೋವಿಡ್ ಆಸ್ಪತ್ರೆ ಅವ್ಯವಸ್ಥೆಯ ಮೊಬೈಲ್ ಆಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಭಾಷಣೆಯುದ್ದಕ್ಕೂ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯನ್ನು ಬಿಚ್ಚಿಟ್ಟಿದ್ದು, ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆಯಾ? ಎಂಬ ಅನುಮಾನ ಮೂಡಿಸಿದೆ

ಈ ಆಡಿಯೋ ವೈರಲ್ ಆಗಿರುವ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರನ್ನು ಗುರುವಾರ ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ಕೋವಿಡ್ ಸೋಂಕಿತರ ಸಂಖ್ಯೆಯನ್ನು ಜಿಲ್ಲಾಡಳಿತವಾಗಲಿ, ಆರೋಗ್ಯ ಇಲಾಖೆಯಾಗಲಿ ಮುಚ್ಚಿಡುತ್ತಿಲ್ಲ, ಸಾವಿನ ಸಂಖ್ಯೆಯನ್ನು ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ದಾಖಲಿಸುತ್ತಿದ್ದಾರೆ. ಈ ರೀತಿಯ ಆರೋಪಗಳು ಸುಳ್ಳು. ದುರುದ್ದೇಶದಿಂದ ಇಂತಹ ಆಡಿಯೋ ವೈರಲ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಪಾಸಿಟಿವ್ ಸಂಖ್ಯೆ ಸದ್ಯ ಶೇ.7ಕ್ಕೆ ಇಳಿಕೆಯಾಗಿದೆ. ಈ ವಾರಾಂತ್ಯಕ್ಕೆ ಇದು ಶೇ.5ಕ್ಕೆ ಇಳಿಕೆಯಾಗಲಿದೆ. ಕೋವಿಡ್ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಬುಧವಾರ 1,400 ಜನರನ್ನು ಆರ್‍ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಿಸಲಾಗಿದೆ. 160 ಪಾಸಿಟಿವ್ ಬಂದಿದೆ. ಸರಕಾರ ನಿಗದಿಪಡಿಸಿದ ಆದ್ಯತೆ ಮೇರೆಗೆ ಲಸಿಕೆ ವಿತರಣೆಯನ್ನೂ ಮಾಡಲಾಗುತ್ತಿದೆ. ಮೂರನೇ ಅಲೆಯ ನಿಯಂತ್ರಣಕ್ಕೂ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ತಜ್ಞ ವೈದ್ಯರ ಸಭೆಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ 11 ಬ್ಲ್ಯಾಕ್ ಫಂಗಲ್ಸ್ ಪ್ರಕರಣ ಕಂಡುಬಂದಿದ್ದು, ಮಂಗಳೂರು, ಬೆಂಗಳೂರು ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸ ಬ್ಲ್ಯಾಕ್ ಫಂಗಸ್ ಪ್ರಕರಣ ಮತ್ತೆ ಪತ್ತೆಯಾಗಿಲ್ಲ.

-ಡಾ.ಉಮೇಶ್, ಡಿಎಚ್‍ಒ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News