ಪರಿಹಾರ ಕೋರಿದ 862 ಆಟೊ, ಟ್ಯಾಕ್ಸಿ ಚಾಲಕರ ಅರ್ಜಿ ವಜಾ

Update: 2021-06-17 18:21 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.17: ಕೋವಿಡ್ ಸಂಬಂಧ ರಾಜ್ಯ ಸರಕಾರ ಘೋಷಣೆ ಮಾಡಿದ ಆರ್ಥಿಕ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದ 862 ಮಂದಿ ಆಟೊ ಮತ್ತು ಟ್ಯಾಕ್ಸಿ ಚಾಲಕರ ಅರ್ಜಿ ವಜಾಗೊಂಡಿದೆ.

ಲಾಕ್‍ಡೌನ್ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಲವು ವರ್ಗಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಅದರನ್ವಯ ಆಟೊ ರಿಕ್ಷಾ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ (ಲೈಸೆನ್ಸ್ ಹೊಂದಿದ ಹಾಗೂ ನೋಂದಣಿ ಮಾಡಿಸಿದ) ಒಂದು ಬಾರಿ ಪರಿಹಾರವಾಗಿ 3 ಸಾವಿರ ರೂ. ನೀಡಲು ನಿರ್ಧರಿಸಲಾಗಿತ್ತು.

ಹೀಗಾಗಿ, ಪರಿಹಾರ ಧನ ನೀಡಲು ಅರ್ಜಿಗಳನ್ನು `ಸೇವಾ ಸಿಂಧು’ ಆನ್‍ಲೈನ್ ಮೂಲಕ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿತ್ತು. ಸದ್ಯ ಇಲ್ಲಿಯವರೆಗೂ ಒಟ್ಟು 2,33,706 ಅರ್ಜಿಗಳನ್ನ ಸಾರಿಗೆ ಇಲಾಖೆ ಸ್ವೀಕಾರ ಮಾಡಿದೆ.

ಈ ಪೈಕಿ ಸಾರಿಗೆ ಇಲಾಖೆಯಿಂದ 2,27,886 ಅರ್ಜಿಗಳಿಗೆ ಅನುಮೋದನೆ ಸಿಕ್ಕಿದೆ. 1,97,121 ಅರ್ಜಿಗಳು ಆಟೊ ಅಪ್ರೋವ್ಡ್ ಆಗಿದ್ದರೆ, ಮ್ಯಾನುಯಲ್ ಆಗಿ 30,765 ಅರ್ಜಿಗಳು ಅಂಗೀಕೃತವಾಗಿವೆ. ಇನ್ನು, ಬಾಕಿ ಇರುವ 4958 ಅರ್ಜಿಗಳ ಪರಿಶೀಲನೆ ಆಗಬೇಕಿದ್ದು, ಈ ನಡುವೆ 862 ಅರ್ಜಿಗಳು ದಾಖಲೆಗಳು ಸರಿ ಇಲ್ಲದೆ ವಜಾಗೊಳಿಸಲಾಗಿದೆ.

ರಾಜ್ಯಾದ್ಯಂತ 2.10 ಲಕ್ಷ ಆಟೊ, ಟ್ಯಾಕ್ಸಿ ಚಾಲಕರಿದ್ದು, ತಲಾ 3 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳ ಸಲ್ಲಿಕೆ ಹಾಗೂ ಅನುಮೋದನೆಯಾಗಿದ್ದು ಹೆಚ್ಚುವರಿ ಅರ್ಜಿಗಳಿಗೂ ಪರಿಹಾರ ನೀಡುವಂತೆ ಪ್ರಸ್ತಾವನೆಯನ್ನ ಸಾರಿಗೆ ಇಲಾಖೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News