2.49 ಲಕ್ಷ ವಿಕಲಚೇತನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ: ಹೈಕೋರ್ಟ್ ಗೆ ಸರಕಾರ ಹೇಳಿಕೆ

Update: 2021-06-17 18:23 GMT

ಬೆಂಗಳೂರು, ಜೂ.17: ನ್ಯಾಯಾಲಯದ ನಿರ್ದೇಶನದಂತೆ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಈವರೆಗೆ 2.49 ಲಕ್ಷ ವಿಕಲಚೇತನರಿಗೆ ಲಸಿಕೆ ನೀಡಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.  

ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠಕ್ಕೆ ಸರಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ.

ಸರಕಾರ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ರಾಜ್ಯದಲ್ಲಿ 8,62,028 ವಿಕಲಚೇತರಿದ್ದಾರೆ. ಇವರಲ್ಲಿ 18 ವರ್ಷ ಮೇಲ್ಪಟ್ಟ 2,49,504 ವಿಕಲಚೇತನರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಲಾಗಿದೆ. ಅದೇ ರೀತಿ ಸ್ಲಂ ನಿವಾಸಿಗಳಿಗೆ, ಕೋವಿಡ್ ವಾರಿಯರ್ಸ್ ಕುಟುಂಬಗಳಿಗೂ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಾರ್ಮಿಕರಿಗೆ ಉಚಿತ ಪಡಿತರ-ಆರ್ಥಿಕ ನೆರವು: ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿ ಮಾಡಿದ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕ ವರ್ಗಗಳಿಗೆ ನೆರವು ನೀಡಲು ಸರಕಾರ ಕ್ರಮ ಕೈಗೊಂಡಿದೆ. ಕಾರ್ಮಿಕರಿಗೆ ಪಡಿತರ ನೀಡುವ ಸಲುವಾಗಿ ಜೂನ್ 14ರಂದು 31.61 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ 3.8 ಲಕ್ಷ ವಲಸೆ ಕಾರ್ಮಿಕರ ಕುಟುಂಬಗಳಿಗೆ ತಲಾ 10 ಕೆಜಿ ಅಕ್ಕಿ, ಒಂದು ಕೆಜಿ ಬೇಳೆ, ಎಣ್ಣೆ, ಉಪ್ಪು ಹಾಗೂ ಒಂದು ಪಾಕೆಟ್ ಸಾಂಬರ್ ಪೌಡರ್ ಇರುವ 832 ರೂ ಮೌಲ್ಯದ ಕಿಟ್ ವಿತರಿಸಲಾಗಿದೆ ಎಂದು ಸರಕಾರ ತಿಳಿಸಿದೆ.

ಅಲ್ಲದೇ, ಅಸಂಘಟಿತ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ರಾಜ್ಯದಲ್ಲಿ 43 ಅಸಂಘಟಿತ ಕಾರ್ಮಿಕರ ವರ್ಗಗಳನ್ನು ಗುರುತಿಸಲಾಗಿದೆ. ಇಂತಹ 1,19,642 ಫಲಾನುಭವಿ ಕಾರ್ಮಿಕ ಕುಟುಂಬಗಳಿಗೆ ಒಂದು ಬಾರಿಯಂತೆ ತಲಾ 5 ಸಾವಿರ ನೆರವು ನೀಡಲಾಗಿದೆ ಎಂದು ಸರಕಾರ ತನ್ನ ಲಿಖಿತ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News