ಸಿದ್ದರಾಮಯ್ಯ ಇರುವುದರಿಂದ ಪಕ್ಷ ಉಳಿದುಕೊಂಡಿದೆ, ಅವರನ್ನು ಬಿಟ್ಟರೆ ಕಾಂಗ್ರೆಸ್ ಝೀರೊ: ಹೆಚ್.ಡಿ.ರೇವಣ್ಣ

Update: 2021-06-18 06:15 GMT

ಹಾಸನ, ಜೂ.17: ದೇವೇಗೌಡರನ್ನು ಪ್ರಧಾನಿಯಿಂದ ಕೆಳಗಿಳಿಸಿದ ಶಾಪದಿಂದ ಕಾಂಗ್ರೆಸ್ ಪಕ್ಷಕ್ಕೆ ಈ ಪರಿಸ್ಥಿತಿ ಬಂದಿದೆ. ಆದರೆ ಸಿದ್ದರಾಮಯ್ಯ ಇರುವುದರಿಂದ ಪಕ್ಷ ಉಳಿದುಕೊಂಡಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಇರುವುದರಿಂದಲೇ ಕಾಂಗ್ರೆಸ್ ಉಳಿದಿದೆ. ಅವರು ಏನಾದರೂ ಕೈಬಿಟ್ಟರೆ ಪಕ್ಷವನ್ನು ಯಾರೂ ಮುಳುಗಿಸಬೇಕಾಗಿಲ್ಲ. ಕಾಂಗ್ರೆಸ್ ಪಕ್ಷ ತಾನಾಗಿಯೇ ಮುಳುಗಿ ಹೋಗುತ್ತದೆ ಎಂದು ರೇವಣ್ಣ ಮೆಚ್ಚುಗೆಯ ಮಾತನಾಡಿದರು.

ದೇವೇಗೌಡರನ್ನು ಮತ್ತು ಕುಮಾರಸ್ವಾಮಿಯಣ್ಣನನ್ನು ಮುಗಿಸಿದ್ದು ಕಾಂಗ್ರೆಸ್. ಸಿದ್ದರಾಮಯ್ಯ ಇರೋದಕ್ಕೆ ಕಾಂಗ್ರೆಸ್ ಗೆ 70 ಸೀಟು ಬಂದಿದೆ. ಸಿದ್ದರಾಮಯ್ಯರನ್ನ ಬಿಟ್ಟರೆ ಕಾಂಗ್ರೆಸ್ ಝೀರೊಗೆ ಇಳಿಯುತ್ತದೆ. ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ ಶಾಪದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಈ ಪರಿಸ್ಥಿತಿ ಬಂದಿದೆ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಗೃಹ ಸಚಿವರ ಭೇಟಿ ಮಾಡಿದ ವಿಚಾರವಾಗಿ ಮಾತನಾಡಿದ ರೇವಣ್ಣ, ನಮ್ಮ ಹೊಳೆನರಸೀಪುರದಲ್ಲಿ ಪೊಲೀಸ್ ಠಾಣೆ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಅದರ ಕೆಲಸ ಪೂರ್ತಿ ಆಗಿಲ್ಲ. ಹಾಗಾಗಿ ಹೋಗಿದ್ದೆ. ನೀನು ನನ್ನ ಸ್ನೇಹಿತ ಅದರೆ ಮಾಡಿಕೊಡಿ ಎಂದು ಕೇಳಿಕೊಂಡೆ. ಅವರ ಭೇಟಿ ವೇಳೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ರಾಜಕೀಯ ಚರ್ಚೆ ಮಾಡೋಕೆ ನಾನೇನು ರಾಷ್ಟ್ರೀಯ ನಾಯಕನಾ? ಗೃಹ ಸಚಿವರು ಹಾಗೂ ನನ್ನ ಭೇಟಿ ಹಿಂದೆ ರಾಜಕೀಯ ಉದ್ದೇಶ ಇಲ್ಲ ಎಂದು ಉತ್ತರಿಸಿದರು.

ರಾಜ್ಯದಲ್ಲಿ ಇನ್ನೂ ಕೊರೋನ ಕಡಿಮೆಯಾಗಿಲ್ಲ. ಇಂತಹ ಕಾಲದಲ್ಲಿ ಕಾಂಗ್ರೆಸ್ ಪಕ್ಷದವರು​ ಪೆಟ್ರೋಲ್ ಡಬ್ಬ ಹಿಡಿಯೋದು ಬೇಡ. ಇವರಿಗೆ ಜನರ ಪ್ರಾಣ ಮುಖ್ಯ ಅಲ್ಲ. ಅದರಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳುವುದು ಮುಖ್ಯ. ರಾಜ್ಯದಲ್ಲಿ ಬಿಜೆಪಿ ಅದಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣ. ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷ ಮುಗಿಸಲು ಹೊರಟಿದ್ದಾರೆ. ಕಾಂಗ್ರೆಸ್ ನವರು ಎ ಟೀಂ, ಬಿ ಟೀಂ ಅಂದ್ರು. ಆಮೇಲೆ ನಮ್ಮನ್ನೇ ಬಂದು ತಬ್ಬಿಕೊಂಡರು ಎಂದು ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News