ಬಿತ್ತನೆ ಬೀಜ ಪೂರೈಸದ್ದಕ್ಕೆ ಆಕ್ರೋಶ: ಕೃಷಿ ಅಧಿಕಾರಿಯನ್ನೇ ಕಚೇರಿ ಗೇಟ್ ಗೆ ಕಟ್ಟಿ ಹಾಕಿದ ರೈತರು

Update: 2021-06-18 11:40 GMT

ಬೀದರ್, ಜೂ. 18: ರಾಜ್ಯದಲ್ಲಿ ಮುಂಗಾರು ಉತ್ತಮವಾಗಿದ್ದು ಎಲ್ಲೆಡೆ ಮಳೆ ಬೀಳುತ್ತಿದೆ. ಆದರೆ, ಬಿತ್ತನೆ ಬೀಜ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿದ ರೈತರು, ಜಿಲ್ಲೆಯ ಔರಾದ್‍ನಲ್ಲಿ ಕೃಷಿ ಅಧಿಕಾರಿಯನ್ನೇ ಕಚೇರಿ ಗೇಟ್‍ಗೆ ಕಟ್ಟಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಸಿದೆ.

ಶುಕ್ರವಾರ ಔರಾದ್ ಕೃಷಿ ತರಬೇತಿ ಕೇಂದ್ರದ ಬೀಜ ವಿತರಣಾ ಕೇಂದ್ರದ ಮುಂಭಾಗ ಕೃಷಿ ಅಧಿಕಾರಿ ಭೀಮರಾವ್ ಸಿಂಧೆ ಎಂಬವರನ್ನು ಕಚೇರಿಯ ಗೇಟ್‍ಗೆ ಕಟ್ಟಿ ಹಾಕಿ ಕೂಡಲೇ ನಮಗೆ ಸೋಯಾಬಿನ್ ಬಿತ್ತನೆ ಬೀಜ ಪೂರೈಕೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

'ಔರಾದ್ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸೋಯಾಬಿನ್ ಬಿತ್ತನೆ ಬೀಜದ ಕೊರತೆ ಇದೆ. ರೈತರು ಬೀಜಕ್ಕಾಗಿ ಪರದಾಡುತ್ತಿದ್ದಾರೆ. ಈ ವಿಷಯದಲ್ಲಿ ಜಂಟಿ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು ಹೆಚ್ಚಿನ ಬೀಜ ಸರಬರಾಜು ಮಾಡುತ್ತಿಲ್ಲ. ಇದರಲ್ಲಿ ನನ್ನದೇನೂ ತಪ್ಪಿಲ್ಲ. ನಾನು ಫೋನ್ ಮಾಡಿದರೆ, ಮೇಲಾಧಿಕಾರಿಗಳು ಇಂದು-ನಾಳೆ ಎಂದು ಹೇಳಿದರೆ ನಾನು ರೈತರಿಗೆ ಉತ್ತರ ನೀಡಬೇಕಾಗಿದೆ' ಎಂದು ಕೃಷಿ ಅಧಿಕಾರಿ ಭೀಮರಾವ್ ಸಿಂಧೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಘಟನೆ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಔರಾದ್ ಪಿಎಸ್ಸೈ ಮಂಜೇಗೌಡ, ರೈತರೊಂದಿಗೆ ಸಮಾಲೋಚನೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.

'ಜಿಲ್ಲೆಯ ಔರಾದ್ ಹಾಗೂ ಕಮಲನಗರ ತಾಲೂಕಿನಾದ್ಯಂತ ಸೋಯಾಬಿನ್ ಬಿತ್ತನೆ ಬೀಜದ ಕೊರತೆ ವ್ಯಾಪಕವಾಗಿದೆ. ಮುಂಗಾರು ಮಳೆ ಸಕಾಲಕ್ಕೆ ಆಗಿರುವುದರಿಂದ ರೈತರು ಬೀಜಕ್ಕಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರಮುಖ ವಾಣಿಜ್ಯ ಬೆಳೆಯಾದ ಸೋಯಾಬಿನ್ ಬೀಜ ಕೊರತೆ ಕುರಿತು ತಾಲೂಕು ಕೃಷಿ ಅಧಿಕಾರಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಕೂಡಲೇ ರೈತರಿಗೆ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಸರಕಾರ ಕ್ರಮ ಕೈಗೊಳ್ಳಬೇಕು' ಎಂದು ರೈತರು ಸರಕಾರಕ್ಕೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News