ಕೋವಿಡ್ 3ನೇ ಅಲೆ ತಡೆಗೆ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ: ಗೃಹ ಸಚಿವ ಬೊಮ್ಮಾಯಿ

Update: 2021-06-18 11:34 GMT

ಬೆಂಗಳೂರು, ಜೂ.18: ರಾಜ್ಯದಲ್ಲಿ ಎದುರಾಗಬಹುದಾದ ಕೋವಿಡ್ ಮೂರನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶುಕ್ರವಾರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬೀದಿ ವ್ಯಪಾರಿಗಳಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ವಿಕಲಚೇತನರಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಕೋವಿಡ್ ಮೂರನೇ ಅಲೆಯಿಂದ ಜನತೆ ಆರೋಗ್ಯವನ್ನು ಸಂರಕ್ಷಿಸುವ ಸಲುವಾಗಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ 24 ಸಾವಿರ ಆಕ್ಸಿಜನ್ ಬೆಡ್ ವ್ಯವಸ್ಥೆ ಹಾಗೂ 5 ಸಾವಿರ ವೆಂಟಿಲೇಟರ್ ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್‍ನಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಜನತೆ ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಹಾಗೂ ಲಸಿಕೆ ಹಾಕಿಸಿಕೊಂಡ ನಂತರವು ಕೋವಿಡ್ ಮಾರ್ಗಸೂಚಿಗಳಾದ ಸುರಕ್ಷಿತ ಅಂತರ, ಸ್ಯಾನಿಟೈಸ್ ಹಾಗೂ ಮಾಸ್ಕನ್ನು ಹಾಕಿಕೊಳ್ಳುವ ಮೂಲಕ ಕೋವಿಡ್ ನಿಯಂತ್ರಣದಲ್ಲಿ ಸರಕಾರದೊಂದಿಗೆ ಕೈ ಜೋಡಿಸಬೇಕೆಂದು ಅವರು ತಿಳಿಸಿದ್ದಾರೆ.

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಗೋವಿಂದರಾಜನಗರ ಕ್ಷೇತ್ರದ ಜನತೆಗೆ ಅನ್ನ, ವಸತಿ, ಆರೋಗ್ಯ ಹಾಗೂ ಉದ್ಯೋಗ ಕಲ್ಪಿಸುವುದು ನನ್ನ ಗುರಿ. ಇದನ್ನೇ ರಾಜ್ಯದ ಎಲ್ಲ ಭಾಗದ ಜನತೆಗೆ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇನೆಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಡಾ.ಅರುಣ್ ಸೋಮಣ್ಣ, ಮಾಜಿ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ, ಜಯರತ್ನ, ಪಲ್ಲವಿ, ವಿಶ್ವನಾಥಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News