ಕಾರ್ಮಿಕರು ಖುಷಿಗಾಗಿ ಮ್ಯಾನ್‌ಹೋಲ್‌ಗೆ ಇಳಿದರು ಎಂದು ಹೇಳುತ್ತಿದ್ದೀರಾ?: ಹೈಕೋರ್ಟ್ ಅಸಮಾಧಾನ

Update: 2021-06-18 12:49 GMT

ಬೆಂಗಳೂರು, ಜೂ.17: ಕಲಬುರಗಿ ಜಿಲ್ಲೆಯ ಕೈಲಾಶ್ ನಗರದ ಮ್ಯಾನ್‌ಹೋಲ್‌ಗೆ ಪೌರ ಕಾರ್ಮಿಕರು ಸ್ವಯಂ ಪ್ರೇರಣೆಯಿಂದ ಇಳಿದು ಸಾವನ್ನಪ್ಪಿದ್ದಾರೆ ಎಂಬ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹೇಳಿಕೆ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಮನುಷ್ಯರಿಂದ ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013ರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಎಐಸಿಸಿಟಿಯು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ಈ ವೇಳೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪರ ವಕೀಲರು ವಾದಿಸಿ, ಕಲಬುರಗಿ ನಗರದಲ್ಲಿ ಮ್ಯಾನ್‌ಹೋಲ್‌ಗೆ ಇಳಿದು ಮೃತಪಟ್ಟವರಲ್ಲಿ ಒಬ್ಬ ಪೌರ ಕಾರ್ಮಿಕ ಸ್ವಯಂಪ್ರೇರಣೆಯಿಂದ ಶೌಚಗುಂಡಿಗೆ ಇಳಿದಿದ್ದರು ಎಂದು ಪೀಠಕ್ಕೆ ತಿಳಿಸಿದರು. 

ಈ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಮ್ಯಾನ್‌ಹೋಲ್‌ಗೆ ಇಳಿದರು ಎಂದು ನೀವು ಹೇಗೆ ನಿಲುವು ತಳೆಯಬಹುದು? ನಿಮ್ಮ (ಮಂಡಳಿ) ಶೋಧನೆಗಳ ಸ್ವರೂಪದ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಶೌಚಗುಂಡಿ ಕಾರ್ಮಿಕರು ತಮ್ಮ ಖುಷಿಗಾಗಿ ಮ್ಯಾನ್‌ಹೋಲ್‌ಗೆ ಇಳಿದರು ಎಂದು ನೀವು ಸೂಚಿಸುತ್ತಿದ್ದೀರಾ? ಎಂದು ಪ್ರಶ್ನಿಸಿತು.

ಮಾತು ಮುಂದುವರಿಸಿದ ಜಲಮಂಡಳಿ ಪರ ವಕೀಲರು, ಮ್ಯಾನ್‌ಹೋಲ್‌ನಲ್ಲಿ ಸಮಸ್ಯೆ ಏನಿದೆ ಎಂದು ಪರಿಶೀಲಿಸಲು ಪೌರ ಕಾರ್ಮಿಕರೊಬ್ಬರು ಸ್ವತಃ ಶೌಚಗುಂಡಿಗೆ ಇಳಿದರು. ಒಳಗೆ ಇಳಿದ ನಂತರ ಅವರು ಪ್ರಜ್ಞೆ ತಪ್ಪಿದರು. ಇದನ್ನು ಕಂಡು ಮತ್ತೊಬ್ಬ ಕಾರ್ಮಿಕ ಕೂಡ ಗುಂಡಿಗೆ ಇಳಿದು ಅಲ್ಲಿ ಸಿಲುಕಿಕೊಂಡರು. ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬಳಿಕ ಮೃತಪಟ್ಟರು ಎಂದು ಪೀಠಕ್ಕೆ ತಿಳಿಸಿದರು. 

ಈ ಹೇಳಿಕೆಯನ್ನು ಮಾನ್ಯ ಮಾಡದ ನ್ಯಾಯಪೀಠ, ವ್ಯಕ್ತಿಗಳು ಸ್ವಯಂಪ್ರೇರಣೆಯಿಂದ ಗುಂಡಿಗೆ ಇಳಿದರು ಎಂದು ಮಂಡಳಿ ಹೇಗೆ ಹೇಳುತ್ತದೆ? ಅವರು ಮಲದ ಗುಂಡಿಗೆ ಏಕೆ ಇಳಿದರು? ಏಕೆಂದರೆ ಅವರನ್ನು ಇಳಿಯಿರಿ ಎಂದು ಹೇಳಲಾಯಿತು, ಇದು ಸರಿಯೇ? ಎಂದು ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಜಲಮಂಡಳಿ ಇಡೀ ಘಟನೆಗೆ ಸಂಬಂಧಿಸಿದಂತೆ ಐದು ಮಂದಿ ಪ್ರತ್ಯಕ್ಷದರ್ಶಿಗಳಿದ್ದಾರೆ ಎಂದು ತಿಳಿಸಿತು. ಅವರನ್ನು ಮ್ಯಾನ್‌ಹೋಲ್‌ಗೆ ಇಳಿಯಲು ಸೂಚಿಸಿದ್ದರೆ ಅವರನ್ನು ನೇಮಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಲಾಗಿದೆ ಎಂದು ತಿಳಿಸಿದರು.

ಇಬ್ಬರು ಮೃತ ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಮಲದಗುಂಡಿಗೆ ಇಳಿದರೇ ಅಥವಾ ಹಾಗೆ ಇಳಿಯಲು ಸೂಚಿಸಲಾಗಿತ್ತೇ ಎಂದು ಪತ್ತೆ ಹಚ್ಚಲು ಐದು ಮಂದಿ ಪ್ರತ್ಯಕ್ಷದರ್ಶಿಗಳ ವರದಿ ಸಲ್ಲಿಸುವಂತೆ ಮಂಡಳಿಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಜು.6ಕ್ಕೆ ಮುಂದೂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News