ಶಿವಮೊಗ್ಗದಲ್ಲಿ ಮುಂಗಾರು ಮಳೆಯ ಆರ್ಭಟ: ಮೈದುಂಬಿ ಹರಿಯುತ್ತಿರುವ ಪ್ರಮುಖ ನದಿಗಳು

Update: 2021-06-18 12:53 GMT

ಶಿವಮೊಗ್ಗ, ಜೂ.18: ಜಿಲ್ಲೆಯ ಮಲೆನಾಡು ಮತ್ತು ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳು ಮೈದುಂಬಿ ಹರಿಯುತ್ತಿದೆ.

ಜಿಲ್ಲೆಯ ಪ್ರಮುಖ ನದಿಗಳಾದ ತುಂಗಾ, ಭದ್ರಾ, ಶರಾವತಿ ಸೇರಿದಂತೆ ಎಲ್ಲ ಪ್ರಮುಖ ನದಿಗಳು ನೀರಿನ ಒಳ ಹರಿವಿನ ಪ್ರಮಾಣ ಏರಿಕೆಯಾಗಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ತೀರ್ಥಹಳ್ಳಿ, ಹೊಸನಗರ, ಸಾಗರ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದೆ. ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರತೊಡಗಿದೆ.

ತುಂಗಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರ ಪರಿಣಾಮ ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಆಣೆಕಟ್ಟೆಯಿಂದ ಎಲ್ಲಾ ಗೇಟ್‌ಗಳನ್ನು ತೆರೆದು ನದಿಗೆ ನೀರನ್ನು ಬಿಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗದ ಕೋರ್ಪಲಯ್ಯನ ಛತ್ರದ ಬಳಿ ಇರುವ ಕಲ್ಲಿನ ಮಂಟಪ ಮುಳುಗಲು  ಕೇವಲ 1 ಅಡಿ ಮಾತ್ರ ಇದೆ. ಹೀಗೆ ನಿರಂತರವಾಗಿ ಮಳೆಯಾದರೆ ಮಂಟಪ ಮುಳುಗುವ ಸಾಧ್ಯತೆ ಇದೆ.

ಜಲಾಶಯಗಳ ಒಳ ಹರಿವು ಹೆಚ್ಚಳ: ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳ ಹರಿವು ಹೆಚ್ಚಳವಾಗಿದೆ. ಗಾಜನೂರು ತುಂಗಾ ಜಲಾಶಯಕ್ಕೆ 31,277 ಕ್ಯೂಸೆಕ್ ಒಳ ಹರಿವು ಇದೆ. ಈಗಾಗಲೇ ಜಲಾಶಯ ಭರ್ತಿಯಾಗಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 588.24 ಮೀಟರ್ ಇದೆ.

ಭದ್ರಾ ಜಲಾಶಯದ ಒಳ ಹರಿವು: ಭದ್ರಾವತಿಯ ಭದ್ರಾ ಜಲಾಶಯಕ್ಕೂ ಒಳಹರಿವು ಹೆಚ್ಚಳವಾಗಿದೆ. 21,598 ಕ್ಯೂಸೆಕ್ ಒಳ ಹರಿವು ಇದೆ. ಇದರಿಂದ ಭದ್ರಾ ಜಲಾಶಯದ ನೀರಿನ ಮಟ್ಟ 146.6 ಅಡಿಗೆ ಏರಿಕೆಯಾಗಿದೆ.

ಇನ್ನು, ಲಿಂಗನಮಕ್ಕಿ ಹಿನ್ನೀರು ವ್ಯಾಪ್ತಿಯಲ್ಲೂ ಭಾರಿ ಮಳೆಯಾಗುತ್ತಿದೆ. ಆದ್ದರಿಂದ ಲಿಂಗನಮಕ್ಕಿ ಜಲಾಶಯಕ್ಕೆ 45,413 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಇದರಿಂದ ನೀರಿನ ಮಟ್ಟ ಒಂದೇ ದಿನದಲ್ಲಿ 2.20 ಅಡಿಯಷ್ಟು ಏರಿಕೆಯಾಗಿದ್ದು, ಪ್ರಸಕ್ತ ಜಲಾಶಯದ 1781.45 ಅಡಿಯಷ್ಟು ನೀರಿನ ಸಂಗ್ರಹವಾಗಿದೆ.

ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.ರೈತರು ತಮ್ಮ ಕೃಷಿ  ಜಮೀನುಗಳತ್ತ ಮುಖಮಾಡಿದ್ದಾರೆ. ಭೂಮಿ ಹಸನು ಕಾರ್ಯದಲ್ಲಿ ತೊಡಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News