ಎಚ್.ವಿಶ್ವನಾಥ್ ಬಗ್ಗೆ ಮಾತನಾಡಿದರೆ ನನ್ನ ಬಾಯಿ ಹೊಲಸಾಗುತ್ತದೆ ಎಂದ ರೇಣುಕಾಚಾರ್ಯ

Update: 2021-06-18 13:43 GMT

ಬೆಂಗಳೂರು, ಜೂ. 18: `ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಇಲಾಖೆ ಟೆಂಡರ್ ಪಾರದರ್ಶಕವಾಗಿ ನಡೆದಿದ್ದು, ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ವೆಬ್‍ಸೈಟ್‍ನಲ್ಲಿ ಹಾಕಲಾಗಿದೆ. 20 ಸಾವಿರ ಕೋಟಿ ರೂ.ಟೆಂಡರ್ ಅವ್ಯವಹಾರ ನಡೆದಿದೆ ಎಂಬ ಎಚ್.ವಿಶ್ವನಾಥ್ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ' ಎಂದು ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಎಚ್.ವಿಶ್ವನಾಥ್ ಅವರ ಆಡಿಯೋ, ವಿಡಿಯೋ ಎಲ್ಲರಿಗೂ ಗೊತ್ತಿದೆ. ಆ ಆಡಿಯೋ, ವಿಡಿಯೋ ಪ್ಲೇ ಮಾಡಿದರೆ, ಅವರ ಸಂಸ್ಕೃತಿ ತಿಳಿಯುತ್ತದೆ. ನಾನು ಮುಖ್ಯಮಂತ್ರಿ ವಿರುದ್ಧ ಮಾತನಾಡಬೇಡಿ ಎಂದು ಹೇಳಿದ್ದೇನೆ. ಆದರೂ ವಿಶ್ವನಾಥ್ ಹತಾಶರಾಗಿ ಮಾತನಾಡುತ್ತಿರುವುದು ತಪ್ಪು. ಆ ವ್ಯಕ್ತಿಯ ನಾಲಿಗೆ ಸಂಸ್ಕೃತಿ ಬಗ್ಗೆ ಎಲ್ಲರಿಗೂ ಗೊತ್ತಿದೆ' ಎಂದು ವಾಗ್ದಾಳಿ ನಡೆಸಿದರು.

`ಎಸ್ಸೆಂ ಕೃಷ್ಣ, ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಇದೀಗ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲರ ವಿರುದ್ಧವೂ ವಿಶ್ವನಾಥ್ ಮಾತನಾಡುತ್ತಾರೆ. ನಾನು ಎಂದೂ ಅವರ ಯಾರ ವಿರುದ್ಧ ಹಗುರವಾಗಿ ಮಾತನಾಡುವುದಿಲ್ಲ ಎಂದ ರೇಣುಕಾಚಾರ್ಯ, ಅವರ ಬಗ್ಗೆ ಏನಾದರೂ ಮಾತನಾಡಿದರೆ ನನ್ನ ಬಾಯಿ ಹೊಲಸಾಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು.

ನೋಟಿಸ್ ನೀಡಬೇಕಾಗುತ್ತದೆ

ಮೇಲ್ಮನೆ ಸದಸ್ಯ ಎಚ್.ವಿಶ್ವನಾಥ್ ಅವರು ನನ್ನ ವಿರುದ್ಧ ಮಾತನಾಡುವುದು ಸರಿಯಲ್ಲ. ಅವರು ಇದೇ ರೀತಿ ಮಾತನಾಡುವುದನ್ನು ಮುಂದುವರಿಸಿದರೆ ಕೋರ್ಟ್ ನೋಟಿಸ್ ನೀಡಬೇಕಾಗುತ್ತದೆ. ಕೋರ್ಟ್, ಜನತಾ ನ್ಯಾಯಾಲಯದಿಂದ ಗೆದ್ದು ಬಂದಿರುವ ನನ್ನ ವಿರುದ್ಧ ಆರೋಪ ಮಾಡಿದರೆ ಸಹಿಸುವುದಿಲ್ಲ'

-ಎಚ್.ಹಾಲಪ್ಪ, ಸಾಗರ ಕ್ಷೇತ್ರದ ಶಾಸಕ

ಆರೋಪದಲ್ಲಿ ಹುರುಳಿಲ್ಲ

ಎಚ್.ವಿಶ್ವನಾಥ್ ಬಗ್ಗೆ ನಾನೇನು ಮಾತನಾಡುವುದಿಲ್ಲ. ಅವರ ವಿರುದ್ಧ ಹೈಕಮಾಂಡ್‍ಗೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ. ವಿಜಯೇಂದ್ರ ವಿರುದ್ಧದ ಕಿಕ್‍ಬ್ಯಾಕ್ ಆರೋಪ ಆಧಾರ ರಹಿತ. ಅನಾವಶ್ಯಕವಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಅಂತಹ ಯಾವುದೇ ಹಸ್ತಕ್ಷೇಪವನ್ನು ಅವರು ಮಾಡಿಲ್ಲ. ಆರೋಪಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಇಲಾಖೆ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟನೆ ನೀಡಲಿದ್ದಾರೆ'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News