×
Ad

ಮೇಕೆದಾಟು: ಕೇಂದ್ರದಿಂದ ಶೀಘ್ರವೇ ಅನುಮೋದನೆ ಪಡೆದು ಆರಂಭಕ್ಕೆ ಕ್ರಮ; ಸಿಎಂ ಯಡಿಯೂರಪ್ಪ

Update: 2021-06-18 20:57 IST

ಬೆಂಗಳೂರು, ಜೂ. 18: ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆ ಆರಂಭಕ್ಕೆ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅನುಮತಿ ನೀಡಿದ್ದು, ಆದಷ್ಟು ಬೇಗ ಕೇಂದ್ರ ಸರಕಾರದ ಅನುಮೋದನೆ ಪಡೆದು ಯೋಜನೆ ಆರಂಭಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಪಾಲಿಗೆ ಮೇಕೆದಾಟು ಯೋಜನೆ ಬಹಳ ಮಹತ್ವದ್ದಾಗಿದೆ. ಈ ಯೋಜನೆಯಿಂದ ನಾಲ್ಕು ಸಾವಿರ ಮೆ.ವ್ಯಾ.ವಿದ್ಯುತ್ ಉತ್ಪಾದನೆಯಾಗಲಿದೆ. ಅಲ್ಲದೆ, ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಯೋಜನೆಯೂ ಇದಾಗಿದೆ. ಆದರೆ ತಮಿಳುನಾಡು ಸರಕಾರ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಎನ್‍ಜಿಟಿ ಮುಂದೆ ಅರ್ಜಿ ಸಲ್ಲಿಸಿತ್ತು ಎಂದು ಹೇಳಿದರು.

ರಾಷ್ಟ್ರೀಯ ಹಸಿರು ನ್ಯಾಯಪೀಠ ನಮ್ಮ ವಾದವನ್ನು ಪುರಷ್ಕರಿಸಿದ್ದು, ಯೋಜನೆಗೆ ಹಸಿರು ನಿಶಾನೆ ತೋರಿದೆ. ಹಾಗಾಗಿ ತ್ವರಿತಗತಿಯಲ್ಲಿ ಕೇಂದ್ರ ಸರಕಾರದ ಅನುಮತಿ ಪಡೆದು, ಆದಷ್ಟು ಬೇಗ ಮೇಕೆದಾಟು ಯೋಜನೆ ಆರಂಭಕ್ಕೆ ಸರಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಿದೆ. ಇದರಿಂದ ರಾಜ್ಯಕ್ಕೆ ಅನುಕೂಲವಾಗಲಿದೆ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಭರವಸೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯಕ್ಕೆ ಮಹತ್ವಪೂರ್ಣವಾಗಿರುವ ಮೇಕೆದಾಟು ಯೋಜನೆ ಪ್ರಮುಖವಾಗಿ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸುವಂತಹದ್ದು. ಈ ಯೋಜನೆಗೆ ತಡೆ ಕೋರುವ ಅರ್ಜಿಯ ವಿಚಾರಣೆ ನಡೆಸಿದ ಎನ್.ಜಿ.ಟಿ ಇಂದು ರಾಜ್ಯದ ವಾದವನ್ನು ಮನ್ನಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿದೆ. ಆದಷ್ಟು ಶೀಘ್ರದಲ್ಲಿ ಎಲ್ಲ ಅನುಮತಿಗಳನ್ನು ಪಡೆದು ಯೋಜನೆ ಪ್ರಾರಂಭಿಸಲಾಗುವುದು'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News