ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತೊಮ್ಮೆ ಸ್ಪಷ್ಟನೆ

Update: 2021-06-18 16:35 GMT

ಬೆಂಗಳೂರು, ಜೂ. 18: `ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಇಂದಿಲ್ಲಿ ಯಡಿಯೂರಪ್ಪ ನಾಯಕತ್ವಕ್ಕೆ ಬೆಂಬಲ ಸೂಚಿಸುವ ಮೂಲಕ ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

'ನಾಯಕತ್ವ ಬದಲಾವಣೆ' ಪುಕಾರುಗಳ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಚನೆ ಹಿನ್ನಲೆಯಲ್ಲಿ ರಾಜ್ಯಕ್ಕೆ ಆಗಮಿಸಿದ ಅರುಣ್ ಸಿಂಗ್ ಮೂರು ದಿನಗಳಿಂದ ಪಕ್ಷದ ಶಾಸಕ, ಸಂಸದರು, ಪದಾಧಿಕಾರಿಗಳು ಹಾಗೂ ಕೋರ್ ಕಮಿಟಿ ಸದಸ್ಯರೊಂದಿಗೆ ಸರಣಿ ಸಭೆ ನಡೆಸಿದ ಅವರು, ಯಡಿಯೂರಪ್ಪ ಪರ ಮತ್ತು ವಿರುದ್ಧ ಹಾಗೂ ಭಿನ್ನರ ಅಭಿಪ್ರಾಯಗಳನ್ನು ಆಲಿಸಿದ್ದು, ಪಕ್ಷದ ವರ್ಚಸ್ಸು ಹೆಚ್ಚಿಸಲು ಶ್ರಮಿಸಬೇಕೆಂದು ರಾಜ್ಯ ನಾಯಕರಿಗೆ ಸಲಹೆ- ಸೂಚನೆಗಳನ್ನು ನೀಡಿ, ಹೊಸದಿಲ್ಲಿಗೆ ಹಿಂದಿರುಗಿದ್ದಾರೆ.

'ಬಿಜೆಪಿ ವಿಶ್ವದಲ್ಲೇ ಅತಿದೊಡ್ಡ ಪಕ್ಷ ಎಂಬುದು ಎಲ್ಲರಿಗೂ ಗೊತ್ತಿರಲಿ. ಮಾತನಾಡುವುದಿದ್ದರೆ ಕಾಂಗ್ರೆಸ್, ವಿಫಲ ನಾಯಕ ರಾಹುಲ್ ಗಾಂಧಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡಿ. ಆದರೆ, ಪಕ್ಷದ ಬಗ್ಗೆ ಏನೇ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಚರ್ಚೆಯಾಗಲಿ. ಮನಸೋ ಇಚ್ಛೆ ಹೇಳಿಕೆ ನೀಡಿದರೆ ಸಹಿಸುವುದಿಲ್ಲ' ಎಂದು ಅರುಣ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

'ಬಿಜೆಪಿಯಲ್ಲಿನ ಗೊಂದಲದಿಂದ ಪಕ್ಷದ ಕಾರ್ಯಕರ್ತರಿಗೆ ನೋವುಂಟಾಗುತ್ತದೆ. ಹೀಗಾಗಿ ಯಾರೂ ಕೂಡ ಪಕ್ಷ ವಿರೋಧಿ ಹೇಳಿಕೆ ನೀಡಬಾರದು' ಎಂದು ತಾಕೀತು ಮಾಡಿದ ಅರುಣ್ ಸಿಂಗ್, `ನಾಯಕತ್ವದ ಬಗ್ಗೆ ಇಬ್ಬರು ಅಥವಾ ಮೂವರು ಮುಖಂಡರು ಮಾತ್ರ ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಸ್ಪಷ್ಟನೆ ನೀಡಿದರು.

ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್. ಅಶೋಕ್, ಶ್ರೀರಾಮುಲು, ಮುಖಂಡರಾದ ಡಿ.ಕೆ.ಅರುಣಾ, ಸಿ.ಟಿ.ರವಿ. ರವಿಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News