ಸೀಡಿ ಪ್ರಕರಣದಲ್ಲಿ ವಾದಿಸಲು ಕೋರಿ ಯುವತಿಯಿಂದ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ

Update: 2021-06-18 16:33 GMT

ಬೆಂಗಳೂರು, ಜೂ.18: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‍ನಲ್ಲಿ ವಿಚಾರಣೆಗೆ ಬಂದಿತ್ತು. ಈ ವೇಳೆ ಸಂತ್ರಸ್ತ ಯುವತಿ ಪ್ರಕರಣದಲ್ಲಿ ತಮ್ಮ ವಾದ ಆಲಿಸಲು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದರು.

ಎಸ್‍ಐಟಿ ತನಿಖೆ ಪ್ರಶ್ನಿಸಿ ಯುವತಿ ರಿಟ್ ಸಲ್ಲಿಸಿದ್ದಾಳೆ. ಆ ಅರ್ಜಿಯನ್ನೂ ಪಿಐಎಲ್‍ನೊಂದಿಗೆ ವಿಚಾರಣೆ ನಡೆಸಬೇಕು. ಹೈಕೋರ್ಟ್ ಉಸ್ತುವಾರಿಯಲ್ಲಿದ್ದಾಗ ತನಿಖೆ ಮುಗಿಸಬಾರದು ಎಂದು ಯುವತಿ ಪರ ಸುಪ್ರೀಂಕೋರ್ಟ್ ವಕೀಲೆ ಇಂದಿರಾ ಜೈಸಿಂಗ್ ಪೀಠಕ್ಕೆ ಮನವಿ ಮಾಡಿದರು. 

ತನಿಖೆ ಮುಕ್ತಾಯಗೊಂಡಿಲ್ಲ. ತನಿಖೆಯ ಪ್ರಗತಿ ವರದಿಯನ್ನಷ್ಟೇ ಸಲ್ಲಿಸಲಾಗಿದೆ. ತನಿಖೆಯು ಇನ್ನೂ ಪ್ರಗತಿಯಲ್ಲಿದೆ ಎಂದು ರಾಜ್ಯ ಸರಕಾರದ ಪರವಾಗಿ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಪ್ರತಿಕ್ರಿಯಿಸಿದರು.

ಹೈಕೋರ್ಟ್ ಗೆ  ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಶಾಸಕ ರಮೇಶ್ ಜಾರಕಿಹೊಳಿ ಪರ ವಕೀಲರು ಲಿಖಿತ ಆಕ್ಷೇಪಣೆ ಸಲ್ಲಿಸಿದರು. ಯುವತಿಯ ಅರ್ಜಿಯನ್ನು ಲಿಸ್ಟ್ ಮಾಡಲು ನ್ಯಾಯಾಲಯ ಸೂಚಿಸಿತು. ಈ ನಡುವೆ ಜಂಟಿ ಪೊಲೀಸ್ ಆಯುಕ್ತರು ಮುಚ್ಚಿದ ಲಕೋಟೆಯಲ್ಲಿ ತನಿಖೆಯ ಪ್ರಗತಿ ವರದಿ ಸಲ್ಲಿಸಿದರು. ತನಿಖೆ ಇನ್ನೂ ಮುಂದುವರಿದಿರುದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಎಸ್‍ಐಟಿ ಮುಖ್ಯಸ್ಥರ ಸಮ್ಮತಿ ಮೇರೆಗೆ ತನಿಖಾ ಪ್ರಗತಿ ವರದಿಗೆ ಸಹಿ ಹಾಕಿದ್ದೇನೆ ಎಂದೂ ಜಂಟಿ ಪೊಲೀಸ್ ಆಯುಕ್ತರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಪ್ರಕರಣದ ವಿಚಾರಣೆಯನ್ನು ಜೂ.23ಕ್ಕೆ ಮುಂದೂಡಿದ ನ್ಯಾಯಾಲಯವು ವರದಿಯನ್ನು ಮುಚ್ಚಿದ ಲಕೋಟೆಯಲ್ಲಿಡಲು ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News