ರಾಜ್ಯದಲ್ಲಿ ಜೂನ್, ಜುಲೈ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಕೆನೆಭರಿತ ಹಾಲಿನ ಪುಡಿ ವಿತರಣೆ

Update: 2021-06-18 16:57 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.18: ರಾಜ್ಯದ ಮುಖ್ಯಮಂತ್ರಿಗಳ ಆಶಯದಂತೆ ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೋಷಕಾಂಶದ ಆಹಾರವನ್ನು ಒದಗಿಸುವ ಭಾಗವಾಗಿ ಜೂನ್, ಜುಲೈ ತಿಂಗಳಿಗೆ ಕೆನೆಭರಿತ ಹಾಲಿನ ಪುಡಿಯನ್ನು ವಿತರಿಸಲು ಶಿಕ್ಷಣ ಇಲಾಖೆಯು ಇಂದು 163.71 ಕೋಟಿ ರೂ.ಗಳ ಅನುದಾನವನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಶಾಲೆಗಳು ಭೌತಿಕವಾಗಿ ನಡೆಯದೇ ಇದ್ದರೂ ಮಧ್ಯಾಹ್ನ ಉಪಹಾರದ ಆಹಾರ ಧಾನ್ಯಗಳು, ಅಡುಗೆ ಎಣ್ಣೆ ಸೇರಿದಂತೆ ಪೂರಕ ಸಾಮಗ್ರಿಗಳನ್ನು ನಿರಂತರವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಸರಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ದೊರಕಬೇಕು ಎನ್ನುವ ಸದುದ್ದೇಶದಿಂದ ಈಗ ಜೂನ್ ಹಾಗೂ ಜುಲೈ ತಿಂಗಳುಗಳಿಗೆ ಸಂಬಂಧಿಸಿದಂತೆ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು ಅರ್ಧ ಕಿಲೋಗ್ರಾಂ ಕೆನೆಭರಿತ ಹಾಲಿನ ಪುಡಿಯನ್ನು ಒದಗಿಸಲು ಆಲೋಚಿಸಿದ್ದೇವೆ. ಆ ಮೂಲಕ ನಮ್ಮ ವಿದ್ಯಾರ್ಥಿಗಳ ಆರೋಗ್ಯಕ್ಕೆ ಪರಿಪೂರ್ಣ ಬೆಂಬಲವನ್ನು ದೊರಕಿಸುವ, ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶ ಸರಕಾರದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

ಸರಕಾರದ ಈ ನಿರ್ಧಾರವು ನಮ್ಮ ಮಕ್ಕಳ ಪೌಷ್ಟಿಕತೆಗೆ ಪೂರಕವಾಗುವುದಷ್ಟೇ ಅಲ್ಲ, ಸಂಕಷ್ಟದಲ್ಲಿರುವ ಗ್ರಾಮೀಣ ಹಾಲು ಉತ್ಪಾದಕರ, ರೈತರ ಆರ್ಥಿಕ ಮಟ್ಟ ಸುಧಾರಿಸಲು ನೆರವಾಗಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಈ ಹಾಲಿನ ಪುಡಿಯ ಪ್ಯಾಕೆಟ್ ವಿತರಣಾ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿ ನಿಗದಿ ಪಡಿಸಲಾಗಿದೆ. ತಮ್ಮ ಇಲಾಖೆಯು ಸಲ್ಲಿಸಿದ ಪ್ರಸ್ತಾವನೆಗೆ ಅತಿ ಶೀಘ್ರದಲ್ಲಿ ಅನುಮೋದನೆ ನೀಡಿದ ಮುಖ್ಯಮಂತ್ರಿಗೆ ಧನ್ಯವಾದಗಳು ಎಂದು ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News