'ಸ್ಪುಟ್ನಿಕ್ ವಿ' ಕೋವಿಡ್ ಲಸಿಕೆ ಪ್ರಾಯೋಗಿಕ ಬಳಕೆಗೆ ಫೋರ್ಟಿಸ್‍ ಆಸ್ಪತ್ರೆಗೆ ಅವಕಾಶ

Update: 2021-06-18 17:15 GMT

ಬೆಂಗಳೂರು, ಜೂ.18: ವಿದೇಶಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಹಾಗೂ ಇತ್ತೀಚೆಗಷ್ಟೇ ದೇಶದಲ್ಲಿ ಅನುಮೋದನೆ ಸಿಕ್ಕಿರುವ “ಸ್ಪುಟ್ನಿಕ್ ವಿ” ಕೋವಿಡ್‍ನ ಮೂರನೇ ಲಸಿಕೆಯ ಪ್ರಾಯೋಗಿಕ ಬಳಕೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ಕೇಂದ್ರ ಸರಕಾರದಿಂದ ಅವಕಾಶ ದೊರೆತಿದ್ದು, ಜೂ.19ರಿಂದ ಈ ಪ್ರಾಯೋಗಿಕ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಪ್ರಸ್ತುತ, ದೇಶದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ಮಾತ್ರ ಲಭ್ಯವಿದೆ. ಸ್ಪುಟ್ನಿಕ್ ವಿ ಲಸಿಕೆಗೆ ವಿದೇಶದಲ್ಲಿ ಭಾರಿ ಬೇಡಿಕೆ ಇದೆ. ಆದರೆ, ದೇಶದಲ್ಲಿ ಇದರ ಬಳಕೆಗೆ ಇನ್ನೂ ಅವಕಾಶ ದೊರೆತಿರಲಿಲ್ಲ. ಇತ್ತೀಚೆಗೆ ಕೇಂದ್ರದಿಂದ ಈ ಲಸಿಕೆ ಬಳಕೆಗೆ ಹಸಿರು ನಿಶಾನೆ ದೊರೆತಿದೆ. ಅಲ್ಲದೆ, ಈ ಲಸಿಕೆಯು ಫೋರ್ಟಿಸ್ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಾಗಲಿದೆ. ಹಂತ ಹಂತವಾಗಿ ಈ ಲಸಿಕೆಯು ಫೋರ್ಟಿಸ್‍ನ ಎಲ್ಲಾ ಶಾಖೆಯಲ್ಲೂ ಲಭ್ಯವಾಗಲಿದೆ.

ಸ್ಪುಟ್ನಿಕ್ ವಿ ಲಸಿಕೆಯನ್ನು ಡಾ.ರೆಡ್ಡಿ ಅವರ ಲ್ಯಾಬೋರೇಟರಿಗಳಿಂದ ನೇರವಾಗಿ ಸರಕಾರದ ಮಾರ್ಗಸೂಚಿಯ ಪ್ರಕಾರವೇ ಪಡೆದುಕೊಳ್ಳಲಾಗುವುದು. ಪ್ರಸ್ತುತ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಕೊರತೆ ಇರುವ ಕಾರಣ ಈ ಮೂರನೇ ಲಸಿಕೆಯನ್ನು ದೇಶಕ್ಕೆ ಪರಿಚಯಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೋರ್ಟಿಸ್ ಆಸ್ಪತ್ರೆಗೆ ಈ ಲಸಿಕೆಯನ್ನು ಪ್ರಾಯೋಗಿಕವಾಗಿ ಬಳಕೆ ಮಾಡಲು ಅವಕಾಶ ಸಿಕ್ಕಿದೆ ಎಂದು ಫೋರ್ಟಿಸ್ ಹೆಲ್ತ್ ಕೇರ್ ಎಂಡಿ ಡಾ.ಅಶುತೋಷ್ ರಘುವಂಶಿ ಹೇಳಿದ್ದಾರೆ.

ಸ್ಪುಟ್ನಿಕ್ ವಿ ಲಸಿಕೆಯು ಶೇ.90ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಅಲ್ಲದೇ, ಈ ಲಸಿಕೆ ಪಡೆದವರಲ್ಲಿ ಕೊರೋನ ರೋಗ ಲಕ್ಷಣಗಳೂ ಶೇ.90ರಷ್ಟು ಸೌಮ್ಯವಾಗಿರಲಿದೆ ಎನ್ನಲಾಗಿದೆ. ಹೀಗಾಗಿ ಭಾರತದಲ್ಲೂ ಸ್ಪುಟ್ನಿಕ್ ವಿ ಲಸಿಕೆ ಬೇಡಿಕೆ ಹೆಚ್ಚಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News