ಯಡಿಯೂರಪ್ಪ ಅಧಿಕಾರದ ಚುಕ್ಕಾಣಿಯನ್ನು ತಮ್ಮ ಮಗನ ಕೈಗೆ ಬಿಟ್ಟುಕೊಟ್ಟಿದ್ದಾರೆ: ಸಿದ್ದರಾಮಯ್ಯ

Update: 2021-06-18 17:35 GMT

ಬೆಂಗಳೂರು, ಜೂ.18: ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದ ಚುಕ್ಕಾಣಿಯನ್ನು ತಮ್ಮ ಮಗನ ಕೈಗೆ ಬಿಟ್ಟುಕೊಟ್ಟಿದ್ದಾರೆ. ಆಡಳಿತ ನಿರ್ವಹಿಸಲು ಸಾಧ್ಯವಿಲ್ಲದ ಅವರು ಅತ್ಯಂತ ಕಳಪೆ ಮುಖ್ಯಮಂತ್ರಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಹೊರ ತಂದಿರುವ ‘ಪೆಟ್ರೋಲ್, ಡಿಸೇಲ್ ದರ ನೂರು-ಜನರ ಬದುಕು ನುಚ್ಚು ನೂರು’ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.

ಆಡಳಿತರೂಢ ಬಿಜೆಪಿ ಪಕ್ಷದಲ್ಲಿ ದಿನ ಬೆಳಗಾದರೆ ಕುರ್ಚಿಗಾಗಿ ಜಗಳ ನಡೆಯುತ್ತಿದೆ. ಯಡಿಯೂರಪ್ಪಗೆ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ, ವಯಸ್ಸಾಯಿತು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಎಂದು ನಾನು ಕೇಳುತ್ತಿಲ್ಲ. ಅವರ ಪಕ್ಷದ ಶಾಸಕರೇ ಬೇಡಿಕೆ ಇಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಒಂದು ಟೆಂಡರ್ ಕೊಡಬೇಕಾದರೆ 10 ಪರ್ಸೆಂಟ್ ಕಮೀಷನ್ ಕೇಳುತ್ತಾರೆ. ಐಪಿಎಸ್, ಐಎಎಸ್ ಅಧಿಕಾರಿಗಳ ವರ್ಗಾವಣೆಗೂ ಹಣ ಕೊಡಬೇಕು. ಈ ಸರಕಾರದಲ್ಲಿ ವರ್ಗಾವಣೆಯ ದಂಧೆ ನಡೆಯುತ್ತಿದೆ. ಎಲ್ಲವನ್ನು ತಮ್ಮ ಮಗನ ಕೈಗೆ ಒಪ್ಪಿಸಿರುವ ಯಡಿಯೂರಪ್ಪ ಕಳಪೆ ಮುಖ್ಯಮಂತ್ರಿ ಎಂದು ಅವರು ಟೀಕಿಸಿದರು.

ಜಲಸಂಪನ್ಮೂಲ ಇಲಾಖೆಯಲ್ಲಿ 20 ಸಾವಿರ ಕೋಟಿ ರೂ.ಗಳ ಟೆಂಡರ್‍ನಲ್ಲಿ 10 ಪರ್ಸೆಂಟ್ ಕಮಿಷನ್ ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹಾಗೂ ಅವರ ಮಗನ ವಿರುದ್ಧ ಬಿಜೆಪಿಯ ಶಾಸಕರಾದ ಎಚ್.ವಿಶ್ವನಾಥ್ ನೇರ ಆರೋಪ ಮಾಡಿದ್ದಾರೆ. 20 ಸಾವಿರ ಕೋಟಿ ರೂ.ಗಳಿಗೆ 10 ಪರ್ಸೆಂಟ್ ಅಂದರೆ 2 ಸಾವಿರ ಕೋಟಿ ರೂ.ಗಳ ಕಮಿಷನ್ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್ ಸಿಂಗ್, ಮಾಜಿ ಸಚಿವ ಕೃಷ್ಣಭೈರೇಗೌಡ, ಶಾಸಕರಾದ ಭೈರತಿ ಸುರೇಶ್, ಶರತ್ ಬಚ್ಚೇಗೌಡ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News