ಮೇಕೆದಾಟು ಅಣೆಕಟ್ಟು ಯೋಜನೆ: ಪ್ರಕರಣ ಕೈಬಿಟ್ಟ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

Update: 2021-06-18 18:04 GMT

ಬೆಂಗಳೂರು, ಜೂ.17: ಮೇಕೆದಾಟು ಅಣೆಕಟ್ಟು ಯೋಜನೆ ಕುರಿತಂತೆ ತಮಿಳುನಾಡಿನ ಚನ್ನೈ ಭಾಗದ ಕೆಲ ಪತ್ರಿಕೆಗಳು ಊಹಾಪೋಹದಲ್ಲಿ ಮಾಡಿದ್ದ ವರದಿಯನ್ನು ಆಧರಿಸಿ ರಾಜ್ಯದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‍ಜಿಟಿ) ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣವನ್ನು ಕೈಬಿಟ್ಟು ಆದೇಶಿಸಿದೆ.

ಕರ್ನಾಟಕ ಸರಕಾರ ಸಂಬಂಧಿತ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ ಪರಿಸರ ಕಾನೂನುಗಳನ್ನು ಉಲ್ಲಂಘಿಸಿ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದೆ ಎಂದು ಆರೋಪಿಸಿ ಚೆನ್ನೈ ಭಾಗದ ಕೆಲ ಪತ್ರಿಕೆಗಳು 2021ರ ಎಪ್ರಿಲ್ 15ರಂದು ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2021ರ ಮೇ 21 ರಂದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಜತೆಗೆ ರಾಜ್ಯ, ಕೇಂದ್ರ ಸರಕಾರದ ಹಲವು ಇಲಾಖೆಗಳು ಹಾಗೂ ಪ್ರಾಧಿಕಾರಗಳಿಗೆ ನೋಟಿಸ್ ಜಾರಿ ಮಾಡಿತ್ತು. ಜುಲೈ 5ರೊಳಗೆ ನೋಟಿಸ್‍ಗೆ ಉತ್ತರಿಸುವಂತೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎನ್‍ಜಿಟಿ ಸುಮೊಟೊ ಪ್ರಕರಣ ದಾಖಲಿಸಿಕೊಂಡ ಕ್ರಮವನ್ನು ಮರು ಪರಿಶೀಲಿಸುವಂತೆ ಕೋರಿ ಜೂ.9ರಂದು ಅರ್ಜಿ ಸಲ್ಲಿಸಿತ್ತು. ರಾಜ್ಯ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಸಲ್ಲಿಸಿದ್ದ ಲಿಖಿತ ಮನವಿಯಲ್ಲಿ, ಮೇಕೆದಾಟು ಯೋಜನೆಗೆ ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ಇಐಎ ಅನುಮೋದನೆ ಬಾಕಿ ಇದೆ. ಇನ್ನು ಮೇಕೆದಾಟು ಯೋಜನೆ ಪ್ರಶ್ನಿಸಿ ತಮಿಳುನಾಡು ಸರಕಾರ 2018ರಲ್ಲೇ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಪ್ರಸ್ತುತ ರಾಜ್ಯ ಸರಕಾರ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದಿದ್ದರು.

ಅಲ್ಲದೇ, ಕರ್ನಾಟಕ ಸರಕಾರ 9 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಮೇಕೆದಾಟು ಯೋಜನೆಯು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಉದ್ದೇಶವನ್ನು ಹೊಂದಿದೆ ಎಂದು ವಿವರಿಸಿದ್ದರು. ರಾಜ್ಯದ ವಿವರಣೆ ಆಲಿಸಿದ ನ್ಯಾ.ಆದರ್ಶ ಕುಮಾರ್ ಗೋಯೆಲ್ ಅಧ್ಯಕ್ಷತೆಯ ಐವರು ನ್ಯಾಯಮೂರ್ತಿಗಳಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪೀಠ ಸ್ವಯಂಪ್ರೇರಿತ ಪ್ರಕರಣವನ್ನು ಇತ್ಯರ್ಥಗೊಳಿಸಿ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News