ನೂತನ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಅನ್ಯಾಯ: ಬಂಜಗೆರೆ ಜಯಪ್ರಕಾಶ್

Update: 2021-06-18 18:05 GMT

ಬೆಂಗಳೂರು, ಜೂ.18: ನೂತನ ಶಿಕ್ಷಣ ನೀತಿಯಲ್ಲಿ ನಾಲ್ಕು ವರ್ಷದ ಪದವಿಗೆ ಕನ್ನಡ ಭಾಷೆಯನ್ನು ಕೇವಲ ಒಂದು ವರ್ಷಕ್ಕೆ ಸೀಮಿತಗೊಳಿಸಿ ಕ್ರಮ ಕೈಗೊಂಡಿರುವ ಸರಕಾರದ ಕ್ರಮದಿಂದಾಗಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಬಹುದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.

ಈ ಕುರಿತು ಖಾಸಗಿ ಸುದ್ದಿವಾಹಿನಿಯೊಂದಿಗೆ ಪ್ರತಿಕ್ರಿಯಿಸಿರುವ ಅವರು, ಪದವಿ ಹಂತದಲ್ಲಿ ಮಾತ್ರ ವಿದ್ಯಾರ್ಥಿಗಳು ಸಾಹಿತ್ಯಿಕ ಹಾಗೂ ಭಾಷಾ ಪ್ರೌಢಮೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಆದರೆ, ಸರಕಾರ ನೂತನ ಶಿಕ್ಷಣ ನೀತಿಯ ಮೂಲಕ ಕನ್ನಡ ಭಾಷೆ ಕಲಿಯುವಂತಹ ಅವಕಾಶವನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಯಾವುದೇ ಭಾಷೆಯ ನಿರಂತರ ಬೆಳವಣಿಗೆ ಆಗಬೇಕಾದರೆ ಹೊಸ ತಲೆಮಾರಿನ ವಿದ್ಯಾರ್ಥಿ ಸಮುದಾಯ ಭಾಷೆಯ ಕುರಿತು ಸಂಶೋಧನೆ, ಪಾಂಡಿತ್ಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಪೂರಕವಾದ ಅವಕಾಶವನ್ನು ಆಡಳಿತ ವ್ಯವಸ್ಥೆ ಮಾಡಿಕೊಡಬೇಕಾಗಿತ್ತು. ಆದರೆ, ಇರುವ ಅವಕಾಶವನ್ನೇ ಕುಂಠಿತಗೊಳಿಸುವಂತಹ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಪದವಿಗಳಲ್ಲಿ ಕನ್ನಡ ಭಾಷೆಯ ಕಲಿಕೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸುವುದರಿಂದ ಉದ್ಯೋಗಾವಕಾಶಗಳು ಕಡಿಮೆ ಆಗಲಿದೆ. ಇದೇ ನೀತಿ ಮುಂದುವರೆದರೆ ಕನ್ನಡ ಭಾಷೆಯನ್ನು ಕಲಿಯುವಂತಹ ಆಸಕ್ತಿ ಯುವತಲೆಮಾರಿನಲ್ಲಿ ಕಡಿಮೆ ಆಗುತ್ತಾ ಹೋಗಲಿದೆ. ಈ ಬಗ್ಗೆ ರಾಜ್ಯ ಸರಕಾರ ಎಚ್ಚರಿಕೆ ವಹಿಸಬೇಕೆಂದು ಅವರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಜನರ ಬಳಕೆಯಲ್ಲಿಲ್ಲದ ಹಿಂದಿ ಹಾಗೂ ಸಂಸ್ಕೃತ ಭಾಷೆಯ ಅಭಿವೃದ್ದಿಗೆ ವಿಶ್ವವಿದ್ಯಾಲಯ, ಪೀಠಗಳನ್ನು ಸ್ಥಾಪಿಸಲಾಗುತ್ತಿದೆ. ಆದರೆ, ರಾಜ್ಯದ ಅಸ್ಮಿತೆಯ ಭಾಷೆಯಾದ ಕನ್ನಡಕ್ಕೆ ಇರುವ ಅವಕಾಶವನ್ನೇ ಕಿತ್ತುಕೊಳ್ಳಲಾಗುತ್ತಿದೆ. ಇಂತಹ ಧೋರಣೆಯನ್ನು ಪಕ್ಷಭೇದ ಮರೆತು ಪ್ರತಿಯೊಬ್ಬರು ಖಂಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಕನ್ನಡದಲ್ಲಿ ಸ್ನಾತಕೋತ್ತರ ಪಡೆದವರಿಗೆ ಆಡಳಿತ ವ್ಯವಸ್ಥೆಯಲ್ಲಿ, ವಿವಿಧ ಇಲಾಖೆಯಲ್ಲಿ ಅನುವಾದಕರಾಗಿ, ಹೀಗೆ ಉದ್ಯೋಗ ಭಾಷೆಯಾಗಿ ರೂಪಿಸಬೇಕಾದ ಎಲ್ಲ ಅವಕಾಶಗಳು ಸರಕಾರಕ್ಕಿದೆ. ಆದರೆ, ಯಾರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News