ಮಂಗಳಮುಖಿಯರಿಗೆ ಸರಕಾರಿ ಉದ್ಯೋಗಗಳಲ್ಲಿ ಶೇ.1ರಷ್ಟು ಮೀಸಲಾತಿ: ಹೈಕೋರ್ಟ್ ಗೆ ಮಾಹಿತಿ ಸಲ್ಲಿಕೆ

Update: 2021-06-18 18:09 GMT

ಬೆಂಗಳೂರು, ಜೂ.18: ಮಂಗಳಮುಖಿಯರಿಗೆ ಸರಕಾರದ ಎಲ್ಲ ಉದ್ಯೋಗಗಳಲ್ಲಿಯೂ ಶೇ.1ರಷ್ಟು ಹುದ್ದೆಗಳನ್ನು ಮೀಸಲಿಡುವುದಾಗಿ ಹೈಕೋರ್ಟ್ ಗೆ ಮಾಹಿತಿ ನೀಡಿರುವ ರಾಜ್ಯ ಸರಕಾರ, ಈಗಾಗಲೇ ಕರಡು ಅಧಿಸೂಚನೆಯನ್ನು ಹೊರಡಿಸಿದ್ದೇವೆ ಎಂದು ತಿಳಿಸಿದೆ.

ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಎಚ್‍ಐವಿ ಪೀಡಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಗಮ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ  ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಸರಕಾರ ಈ ಮಾಹಿತಿ ನೀಡಿದೆ.

ವಿಚಾರಣೆ ವೇಳೆ ರಾಜ್ಯ ಸರಕಾರದ ಪರ ಹಾಜರಿದ್ದ ವಕೀಲ ವಿಜಯಕುಮಾರ್ ಪಾಟೀಲ್ ಅವರು, ಪೀಠಕ್ಕೆ ಮಾಹಿತಿ ನೀಡಿ, ಸುಪ್ರೀಂಕೋರ್ಟ್ ನಿರ್ದೇಶದನಂತೆ ಸರಕಾರದ ಎಲ್ಲ ಹುದ್ದೆಗಳಲ್ಲಿಯೂ ಶೇ.1ರಷ್ಟು ಹುದ್ದೆಗಳನ್ನು ಮಂಗಳಮುಖಿರಿಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಕರ್ನಾಟಕ ನಾಗರಿಕ ಸೇವಾ ನೇಮಕಾತಿ ನಿಯಮ-1977ರ ನಿಯಮ 9ಕ್ಕೆ ತಿದ್ದುಪಡಿ ತಂದು 1(ಡಿ)ಯನ್ನು ಸೇರ್ಪಡೆ ಮಾಡಲಾಗುತ್ತಿದೆ. ಈ ಕುರಿತಂತೆ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಕರಡು ಅಧಿಸೂಚನೆಗೆ ಆಕ್ಷೇಪಣೆಗಳನ್ನು ಸ್ವೀಕರಿಸಿದ ಬಳಿಕ ಅಂತಿಮಗೊಳಿಸಲಾಗುವುದು ಎಂದು ವಿವರಿಸಿದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ಮುಂದಿನ ವಿಚಾರಣೆ ವೇಳೆ ಈ ಕುರಿತಂತೆ ಆದ ಬೆಳವಣಿಗೆಗಳ ಮಾಹಿತಿ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಅರ್ಜಿದಾರರ ಮನವಿ ಏನು: ಸುಪ್ರೀಂಕೋರ್ಟ್ 2014ರಲ್ಲಿ ನೀಡಿರುವ ತೀರ್ಪಿನ ಅನುಸಾರ ಮತ್ತು ರಾಜ್ಯ ಸರಕಾರದ ಟ್ರಾನ್ಸ್ ಜೆಂಡರ್ ನೀತಿ-2017 ಹಾಗೂ ಕೇಂದ್ರ ಸರಕಾರದ ತೃತೀಯಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019ರ ಅನುಸಾರ ತೃತೀಯ ಲಿಂಗಿಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲು ಕಲ್ಪಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News