ಸ್ವಪಕ್ಷೀಯರೇ 2 ಸಾವಿರ ಕೋಟಿ ರೂ. ಕಿಕ್‍ಬ್ಯಾಕ್ ಆರೋಪ ಮಾಡಿದ್ದರೂ ತನಿಖೆ ಯಾಕಿಲ್ಲ?: ಕುಮಾರಸ್ವಾಮಿ

Update: 2021-06-19 14:40 GMT

ಬೆಂಗಳೂರು, ಜೂ.19: 2006ರಲ್ಲಿ ಸಿಎಂ ಆಗಿದ್ದ ನನ್ನ ವಿರುದ್ಧ ಬಿಜೆಪಿ ನಾಯಕರೇ 150 ಕೋಟಿ ರೂ. ಗಣಿ ಲಂಚ ಆರೋಪ ಮಾಡಿದ್ದರು. ಸರಕಾರದ ಪಾಲುದಾರ ಪಕ್ಷದವರೇ ದೂರಿದ್ದರಿಂದ ನಾನು ಅದನ್ನು ಲೋಕಾಯುಕ್ತಕ್ಕೆ ವಹಿಸಿ ಪಾರದರ್ಶಕತೆ ಕಾಯ್ದುಕೊಂಡಿದ್ದೆ. ಈಗಿನ ಸರಕಾರದ ವಿರುದ್ಧ ಸ್ವಪಕ್ಷೀಯರೇ 2 ಸಾವಿರ ಕೋಟಿ ರೂ. ನೀರಾವರಿ ಕಿಕ್‍ಬ್ಯಾಕ್ ಆರೋಪ ಮಾಡಿದ್ದಾರೆ. ಈಗ ತನಿಖೆ ಯಾಕಿಲ್ಲ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರಾಕ್ಷಸ ಸರಕಾರವೊಂದನ್ನು ಕೆಡವಿ ಅತ್ಯಂತ ಸಜ್ಜನ, ಸ್ವಚ್ಛ ಸರಕಾರವನ್ನು ಪ್ರತಿಷ್ಠಾಪಿಸಿದವರೇ ಈ ಆರೋಪ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ಸಿಎಂ ಬಿ.ಎಸ್.ಯಡಿಯೂರಪ್ಪ 2006ರಲ್ಲಿ ನಾನು ಇಟ್ಟಂಥ ಹೆಜ್ಜೆಯನ್ನೇ ಇಟ್ಟು ತಾವು ಪ್ರಾಮಾಣಿಕ ಎಂಬುದನ್ನು ಸಾಬೀತು ಮಾಡಬೇಕು. ಹೀಗಾಗಿ ಕೂಡಲೇ ಆರೋಪವನ್ನು ತನಿಖೆಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಭ್ರಷ್ಟಾಚಾರದ ಆರೋಪದಲ್ಲಿ ಅನ್ಯರ ಹಸ್ತಕ್ಷೇಪದ ಆರೋಪವಿದೆ. ಆಡಳಿತದಲ್ಲಿ, ಅದೂ ಸರಕಾರದ ಹಂತದಲ್ಲಿ ಮುಖ್ಯಮಂತ್ರಿಗಳ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಜನರ ಸೇವೆಯಲ್ಲಿ ತೊಡಗಿರುವ ಸರಕಾರದಲ್ಲಿ ಸಂಬಂಧವೇ ಇಲ್ಲದವರ ಹಸ್ತಕ್ಷೇಪ ಸರಿಯಲ್ಲ. ಹೀಗಾಗಿ ಅನ್ಯರ ಹಸ್ತಕ್ಷೇಪದ ವಿಚಾರದಲ್ಲಿಯೂ ಗಂಭೀರ ತನಿಖೆ ನಡೆಯಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News