ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು: ಮುಂದಿನ ವಾರ ಬಿಎಸ್‍ವೈಗೆ ದಿಲ್ಲಿಗೆ ಬುಲಾವ್ ಸಾಧ್ಯತೆ

Update: 2021-06-19 13:07 GMT

ಬೆಂಗಳೂರು, ಜೂ. 19: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಿಕ್ಕಟ್ಟು, ರಾಜಕೀಯ ಗೊಂದಲಗಳ ಹಿನ್ನೆಲೆಯಲ್ಲಿ ಶಾಸಕರ ಪರ-ವಿರೋಧ ಅಭಿಪ್ರಾಯಗಳನ್ನು ಆಲಿಸಿದ್ದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಹೈಕಮಾಂಡ್‍ಗೆ ವರದಿ ನೀಡಿದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ವರಿಷ್ಠರು ಹೊಸದಿಲ್ಲಿಗೆ ಕರೆಸಿಕೊಳ್ಳುವ ಸಾಧ್ಯತೆಗಳಿವೆ.

ಮೂರು ದಿನಗಳಿಂದ ರಾಜ್ಯದಲ್ಲಿದ್ದು ಶಾಸಕರ ಅಹವಾಲು ಸ್ವೀಕರಿಸಿದ್ದ ಅರುಣ್ ಸಿಂಗ್, ನಿನ್ನೆ ರಾತ್ರಿಯೆ ದಿಲ್ಲಿಗೆ ತೆರಳಿದ್ದು, ಶೀಘ್ರದಲ್ಲೇ ಹೈಕಮಾಂಡ್‍ಗೆ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ವರದಿ ಸಲ್ಲಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ವರದಿ ಪರಿಶೀಲಿಸಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೊಸದಿಲ್ಲಿಗೆ ಬರುವಂತೆ ಬುಲಾವ್ ನೀಡಲಿದ್ದಾರೆಂದು ಹೇಳಲಾಗಿದೆ.

ಅರುಣ್ ಸಿಂಗ್ ವರದಿಯನ್ನು ಆಧರಿಸಿ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಒಂದು ಸ್ಪಷ್ಟ ತೀರ್ಮಾನವನ್ನು ಜೂ.24ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು, ಈ ಸಭೆಗೂ ಮುನ್ನ ಇಲ್ಲವೇ ಸಭೆಯ ಸಂದರ್ಭದಲ್ಲೇ ಯಡಿಯೂರಪ್ಪರವರಿಗೆ ದಿಲ್ಲಿಗೆ ಬರುವಂತೆ ಹೈಕಮಾಂಡ್‍ನಿಂದ ಬುಲಾವ್ ಬರಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚಿಸಿಯೇ ರಾಜ್ಯ ಬಿಜೆಪಿ ಬಿಕ್ಕಟ್ಟಿನ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲು ಹೈಕಮಾಂಡ್ ಬಯಸಿದ್ದು, ಅದರಂತೆ ಮುಂದಿನವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದಿಲ್ಲಿಗೆ ಬರುವಂತೆ ವರಿಷ್ಠರು ಸಂದೇಶ ರವಾನಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಹೈಕಮಾಂಡ್‍ನ ತೀರ್ಮಾನವೇ ಅಂತಿಮ, ಅದಕ್ಕೆ ಎಲ್ಲರೂ ಬದ್ಧರಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲೇ ಯಡಿಯೂರಪ್ಪ ಅವರನ್ನು ದಿಲ್ಲಿಗೆ ಕರೆಸಿ ಎಲ್ಲವನ್ನೂ ಬಗೆಹರಿಸುವ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ.

'ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಯಾವುದೇ ಗೊಂದಲವೂ ಇಲ್ಲ' ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದು, ಮುಖ್ಯಮಂತ್ರಿ ವಿರುದ್ಧ ಹಾಗೂ ಪಕ್ಷದ ವಿರುದ್ಧ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದರು. ಆದರೂ ಬಿಜೆಪಿಯಲ್ಲಿ ಗೊಂದಲಗಳು ಮುಗಿದಿಲ್ಲ. ಹೀಗಾಗಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದ್ದು, ಎಲ್ಲರ ಚಿತ್ತ ದಿಲ್ಲಿ ವರಿಷ್ಠರತ್ತ ನೆಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News