ದಕ್ಷಿಣ ಕನ್ನಡ ಸೇರಿ 13 ಜಿಲ್ಲೆಗಳಲ್ಲಿ ಲಾಕ್‍ಡೌನ್ ನಿರ್ಬಂಧಗಳಲ್ಲಿ ಕೆಲ ವಿನಾಯಿತಿ

Update: 2021-06-19 15:24 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ. 19: ಕೋವಿಡ್ ಸೋಂಕಿನ ಎರಡನೆ ಅಲೆ ತಡೆಗಟ್ಟಲು ಹೇರಿದ್ದ ಲಾಕ್‍ಡೌನ್ ಸಡಿಲಿಕೆಗೆ ತೀರ್ಮಾನಿಸಿರುವ ರಾಜ್ಯ ಸರಕಾರ, ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ದರ ಇರುವ 16 ಜಿಲ್ಲೆಗಳಲ್ಲಿ ಶೇ.50ರಷ್ಟು ಸಾರಿಗೆ ಸಹಿತ ಸಂಪೂರ್ಣ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದೆ. ಶೇ.5ರಿಂದ 10ರಷ್ಟು ಪಾಸಿಟಿವಿಟಿ ದರ ಇರುವ 13 ಜಿಲ್ಲೆಗಳಲ್ಲಿ ಲಾಕ್‍ಡೌನ್ ನಿರ್ಬಂಧದಿಂದ ಕೆಲ ವಿನಾಯಿತಿಗಳನ್ನು ನೀಡಿದ್ದರೆ, ಪಾಸಿಟಿವಿಸಿ ದರ ಶೇ.10ಕ್ಕಿಂತ ಹೆಚ್ಚಿರುವ ಮೈಸೂರು ಜಿಲ್ಲೆಯಲ್ಲಿ ಲಾಕ್‍ಡೌನ್ ಮುಂದುವರಿಸಲು ಸರಕಾರ ನಿರ್ಧರಿಸಿದೆ.

ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್‍ಗೆ ಸಂಬಂಧಿಸಿದ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಪಾಸಿಟಿವಿಟಿ ದರದ ಆಧಾರದ ಮೇಲೆ ಕೋವಿಡ್ ಲಾಕ್‍ಡೌನ್ ನಿರ್ಬಂಧಗಳ ಸಡಿಲಿಕೆ ಮಾಡಲು ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಈ ತೀರ್ಮಾನ ಮಾಡಲಾಗಿದೆ ಎಂದರು.

ಶೇ.5 ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ 13 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಿಗೆ ಜೂ.11ರ ಆದೇಶದಲ್ಲಿ ನೀಡಿರುವ ಸಡಿಲಿಕೆಗಳು ಮಾತ್ರ ಅನ್ವಯಿಸುತ್ತವೆ.

ಮೇಲ್ಕಂಡ 13 ಜಿಲ್ಲೆಗಳಲ್ಲಿ ಹಾಲು, ತರಕಾರಿ, ಮಾಂಸ ಸಹಿತ ದಿನಸಿ ಖರೀದಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶವಿದೆ. ಎಲ್ಲ ಕೈಗಾರಿಕೆಗಳಿಗೆ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಉತ್ಪಾದನಾ ಚಟುವಟಿಕೆಗೆ ಅವಕಾಶ. ಬೀದಿ ಬದಿ ವ್ಯಾಪಾರಿಗಳು ಬೆಳಗ್ಗೆ 6ರಿಂದ 2ಗಂಟೆ ವರೆಗೆ ವಹಿವಾಟು ನಡೆಸಲು ಅನುವು ಮಾಡಿಕೊಡಲಾಗಿದೆ. ಹೊಟೇಲ್ ಮತ್ತು ಮದ್ಯದಂಗಡಿಗಳು ಬೆಳಗ್ಗೆ 6 ರಿಂದ ಮಧ್ಯಾಹ್ನ 2ಗಂಟೆ ವರೆಗೆ ಪಾರ್ಸಲ್ ತೆಗೆದುಕೊಂಡು ಹೋಗಲು ಮಾತ್ರವೇ ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾಡಳಿತಗಳು ಇನ್ನಷ್ಟೇ ಖಚಿತಪಡಿಸಬೇಕಿದೆ.

ದಿನದ 24 ಗಂಟೆ ಹೋಮ್ ಡೆಲಿವರಿ ವ್ಯವಸ್ಥೆ ಇರಲಿದ್ದು, ಉದ್ಯಾನವನಗಳು ಬೆಳಗ್ಗೆ 5ರಿಂದ 10ಗಂಟೆಯ ವರೆಗೆ ವಾಯುವಿಹಾರಕ್ಕೆ ಅವಕಾಶ ನೀಡಲಾಗಿದೆ. ಟ್ಯಾಕ್ಸಿ ಮತ್ತು ಆಟೋರಿಕ್ಷಾಗಳಲ್ಲಿ ಇಬ್ಬರು ಪ್ರಯಾಣಿಕರೊಂದಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಪ್ರತಿನಿತ್ಯ ಸಂಜೆ 7ರಿಂದ ಬೆಳಗ್ಗೆ 5ಗಂಟೆಯ ವರೆಗೆ ನೈಟ್‍ ಕರ್ಫ್ಯೂ ಮತ್ತು ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5 ಗಂಟೆಯ ವರೆಗೆ ವಾರಂತ್ಯದ ಕರ್ಫ್ಯೂ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜೂ.21ರಿಂದ ಜುಲೈ 5ರ ವರೆಗೆ ಮೇಲ್ಕಂಡ ಲಾಕ್‍ಡೌನ್ ವಿನಾಯಿತಿ ಹಾಗೂ ನಿರ್ಬಂಧ ಮುಂದುವರಿಯಲಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News