ರಾಹುಲ್ ಗಾಂಧಿ ಜನ್ಮದಿನದ ಅಂಗವಾಗಿ ವ್ಯಾಕ್ಸಿನೇಟ್ ಕರ್ನಾಟಕ ಕಾರ್ಯಕ್ರಮ: ಡಿ.ಕೆ.ಶಿವಕುಮಾರ್

Update: 2021-06-19 16:07 GMT

ಬೆಂಗಳೂರು, ಜೂ.19: ಕೋವಿಡ್ ವಿಚಾರದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಾರ್ಗದರ್ಶನವನ್ನು ಆಡಳಿತ ಪಕ್ಷದವರು ಲೇವಡಿ ಮಾಡಿದ್ದರು. ಅವರ ಸಲಹೆ ಕೇಳಿದ್ದರೆ ಇಂದಿನ ದುಸ್ಥಿತಿಯನ್ನು ತಡೆಯಬಹುದಿತ್ತು. ಆದರೆ ಸರಕಾರ ಅದನ್ನು ಮಾಡಲಿಲ್ಲ. ಕೆಲವು ದಿನಗಳ ನಂತರ ರಾಹುಲ್ ಗಾಂಧಿ ಅವರ ಸಲಹೆ, ವಿಚಾರ, ಚಿಂತನೆಗಳನ್ನು ಮಾಧ್ಯಮಗಳು ಜನರಿಗೆ ತಿಳಿಸುವ ಪ್ರಯತ್ನ ಮಾಡಿದವು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಜನ್ಮದಿನ ಇವತ್ತು. ಈ ಪವಿತ್ರ ದಿನ ರಾಜ್ಯದಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆಯುವಂತಾಗಬೇಕು ಎಂದು ಕಾಂಗ್ರೆಸ್ ಪಕ್ಷ ‘ವ್ಯಾಕ್ಸಿನೇಟ್ ಕರ್ನಾಟಕ’ ಎಂಬ ಅಭಿಯಾನ ಮಾಡುತ್ತಿದೆ ಎಂದರು.

ಇದರಲ್ಲಿ 17 ವರ್ಷದೊಳಗಿನ ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಲಸಿಕೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲು ತಮ್ಮದೇ ಆದ ರೀತಿಯಲ್ಲಿ 2 ನಿಮಿಷದೊಳಗಿನ ವಿಡಿಯೋ ಮಾಡಿ, ಅದನ್ನು ಜುಲೈ 1ರ ಒಳಗಾಗಿ www.vaccinatekarnataka.com ಗೆ ಅಪ್ ಲೋಡ್ ಮಾಡಿ. ಈ ವಿಡಿಯೋಗಳನ್ನು ಹಾಡು, ನೃತ್ಯ, ಸಂಗೀತ, ಕಲೆ ಸೇರಿದಂತೆ ಸೃಜನಾತ್ಮಕವಾಗಿ ಮಾಡಿ ಕಳುಹಿಸಬಹುದು. ಅತ್ಯುತ್ತಮ ವಿಡಿಯೋ ಮಾಡಿದ 100 ಮಂದಿಗೆ ನಾವು ಆಂಡ್ರಾಯ್ಡ್ ಟ್ಯಾಬ್‍ಗಳನ್ನು ಬಹುಮಾನವಾಗಿ ವಿತರಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ, ಎಲ್ಲ ಪಕ್ಷದವರು, ಜನಸಾಮಾನ್ಯರ ಕಾರ್ಯಕ್ರಮ. ದೇಶದಲ್ಲಿ ಶೇ.5 ರಷ್ಟು ಜನರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲಾಗಿಲ್ಲ ಎಂಬ ವರದಿ ಬಂದಿವೆ. 3ನೇ ಅಲೆ ಎದುರಾಗುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೊರೋನ ಸಮಯದಲ್ಲಿ ಆರ್ಥಿಕ ಹೊಡೆತ ಬಿದ್ದಿದ್ದು, ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಹೀಗಾಗಿ ಈ ಸಮಸ್ಯೆಯಿಂದ ಹೊರಬರಲು ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. 3ನೇ ಅಲೆ ವೇಳೆಗೆ ಶೇ.80ರಷ್ಟು ಜನರಿಗೆ ಲಸಿಕೆ ಕೊಟ್ಟರೆ ಮಾತ್ರ ಇದನ್ನು ತಡೆಯಲು ಸಾಧ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದು, ಹೀಗಾಗಿ ಈ ಪವಿತ್ರ ದಿನ ನಾನು ನಮ್ಮ ಮಕ್ಕಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಪ್ರಕಟಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ಸಚೀನ್ ಮಿಗಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News