ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಿರಂತರವಾಗಿ ಷಡ್ಯಂತ್ರ ನಡೆಸುತ್ತಿದೆ: ಮಾಜಿ ಸಚಿವ ಆಂಜನೇಯ

Update: 2021-06-19 17:10 GMT

ಚಿತ್ರದುರ್ಗ, ಜೂ.19: ದೇಶವನ್ನು ಮುನ್ನಡೆಸುವ ಸಮರ್ಥ ನಾಯಕತ್ವ ರಾಹುಲ್ ಗಾಂಧಿ ಅವರಲ್ಲಿದೆ. ಇವರ ವಿರುದ್ಧ ಬಿಜೆಪಿ ನಿರಂತರವಾಗಿ ಷಡ್ಯಂತ್ರ ನಡೆಸುತ್ತಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಅವರು ಆರೋಪಿಸಿದರು.

ಚಿತ್ರದುರ್ಗ ತಾಲೂಕು ಚನ್ನಯ್ಯನಹಟ್ಟಿ ದಲಿತ ಕಾಲನಿಯಲ್ಲಿ ಕೋರೋನ ಜಾಗೃತಿ ಹಾಗೂ ರಾಹುಲ್ ಗಾಂಧಿ ಜನ್ಮದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸ್ಥಳೀಯ ನಿವಾಸಿಗಳಿಗೆ ಸಿಹಿ ವಿತರಿಸಿ ಮಾಜಿ ಸಚಿವರು ಮಾತನಾಡಿದರು.

ಕೋರೋನ ಸೋಂಕು ಚಿನಾ ದೇಶದಲ್ಲಿ ಕಾಣಿಸಿಕೊಂಡು ವಿವಿಧ ದೇಶಗಳಿಗೆ ಪ್ರವೇಶ ಮಾಡುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಕುರಿತು ಮೊದಲೇ ಮುನ್ನೇಚ್ಚರಿಕೆಯನ್ನು ನೀಡಿದ್ದು, ಈ ಕುರಿತು ಗಂಭೀರ ಚಿಂತನೆ ನಡೆಸಿ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅದರೆ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ಅವರ ಸಲಹೆಯನ್ನು ಉದಾಸೀನ ಮಾಡಿ ದೇಶದೊಳಗೆ ಕೊರೋನ ಸೋಂಕು ಪ್ರವೇಶಿಸಿ ವ್ಯಾಪಿಸಲು ಕಾರಣರಾದರು ಎಂದರು.

ಇಂದಿರಾ ಗಾಂಧಿ ರೀತಿ ರಾಹುಲ್ ಗಾಂಧಿ ಅವರು ಜನ ಸಾಮಾನ್ಯರೊಂದಿಗೆ ಬೆರೆಯುವ ರೀತಿ, ಮಾಧ್ಯಮದವರೊಂದಿಗೆ ಆಗುವ ಮುಖಾಮುಖಿ, ಸರಳತೆ, ನಿಸ್ವಾರ್ಥ ನಡೆ ಕಂಡು ಬೆಚ್ಚಿರುವ ಬಿಜೆಪಿ, ರಾಹುಲ್ ಗಾಂಧಿ ಅವರ ಕೈಗೆ ಅಧಿಕಾರ ಸಿಕ್ಕರೆ ಮರಳಿ ಬಾರದು ಎಂದು ಅವರ ನಾಯಕತ್ವವನ್ನು ದುರ್ಬಲಗೊಳಿಸಲು ನಿರಂತರವಾಗಿ ಸುಳ್ಳು ಸುದ್ದಿ ಹರಡುತ್ತಿದೆ. ಆದರೆ ಜನ ಬಹಳಷ್ಟು ಪ್ರಬುದ್ಧರಾಗಿದ್ದು, ಬಿಜೆಪಿ ಸುಳ್ಳುಗಳನ್ನು ಅರಿತಿದ್ದಾರೆ. ರಫೆಲ್ ವಿಮಾನ ಖರೀದಿಯಲ್ಲಿ ಆಗಿರುವ ಹಗರಣ ಕುರಿತು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಂಡಿಸಿದ ವಿಚಾರಕ್ಕೆ ಹಿರಿಯ ಸಂಸದೀಯ ಪಟುಗಳೇ ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಹಗರಣ ಕುರಿತು ಕೇಂದ್ರ ಸರ್ಕಾರ ತನಿಖೆಗೆ ಒಪ್ಪಿಸಲಿಲ್ಲ. ಈಗ ಮಾಧ್ಯಮಗಳಲ್ಲಿ ರಫೆಲ್ ಹಗರಣ ಕುರಿತು ಸರಣಿ ವರದಿ ಬರುತ್ತಿದೆ. ಇದು ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನಸ್ಸು ಮಾಡಿದ್ದರೆ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿಸದೇ ತಾವೇ ಸ್ವತಃ ಪ್ರಧಾನಿ ಆಗಬಹುದಿತ್ತು. ಆದರೆ ಮುತ್ಸದ್ಧಿ, ಆರ್ಥಿಕ ತಜ್ಞನಿಗೆ ಪ್ರಧಾನಿ ಸ್ಥಾನ ನೀಡುವ ಮೂಲಕ ತ್ಯಾಗ ಮಾಡಿದ್ದಾರೆ. ಈ ರೀತಿ ಅಧಿಕಾರ ತ್ಯಾಗ ಮಾಡಿದ್ದು ಈ ಶತಮಾನದಲ್ಲಿ ವಿಶ್ವದ ಯಾವ ದೇಶದಲ್ಲೂ ಜರುಗಿಲ್ಲ ಎಂದರು.

ಇಂತಹ ತ್ಯಾಗದ ಕುಟುಂಬದ ವಿದ್ಯಾವಂತ, ವಿವಿಧ ಕ್ಷೇತ್ರದಲ್ಲಿ ಪರಿಣಿತಿ ಪಡೆದಿರುವ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ಏನೆ ಷಡ್ಯಂತ್ರ ನಡೆಸಿದರೂ ದೇಶದ ಚುಕ್ಕಾಣಿ ದೊರೆಯುವ ಕಾಲ ಸನ್ನಿಹಿತವಾಗಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿ ಅವರು ಪ್ರಧಾನಿ ಆಗುವುದು ನಿಶ್ಚಿತ. ಅವರಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಕಳೆದುಕೊಂಡ ಘನತೆ ಮರಳಿ ಬರಲಿದೆ. ದೇಶ ವಿಶ್ವದಲ್ಲಿಯೇ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳಲಿದೆ ಎಂದರು.

ಸತತ ಅವಮಾನ, ಸುಳ್ಳು ಪ್ರಚಾರ ನಡೆಸಿದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಮುನ್ನುಗ್ಗುತ್ತಿರುವ ರಾಹುಲ್ ಗಾಂಧಿ, ಶಿಲ್ಪಿಯ ಕೈಯ ಉಳಿ ಏಟು ತಿಂದು ಕಲ್ಲೊಂದು ಪೂಜೆಗೆ ಅರ್ಹವಾಗುವ ರೀತಿ ದೇಶದ ಬಲಿಷ್ಠ ನಾಯಕರಾಗಿ ರೂಪುಗೊಂಡಿದ್ದಾರೆ. ಈ ಕಾರಣಕ್ಕೆ ಎಷ್ಟೇ ವೈಯಕ್ತಿಕ ಟೀಕೆಗಳನ್ನು ಮಾಡಿದರು, ಪ್ರತಿಪಕ್ಷದವರ ವಿರುದ್ಧ ಪ್ರಬುದ್ಧವಾಗಿ ಆರೋಪ ಮಾಡುವ ರಾಹುಲ್ ಗಾಂಧಿ, ಅವರ ವಿರುದ್ಧ ವೈಯಕ್ತಿಕ ಟೀಕೆ, ವಿರೋಧ ಪಕ್ಷದ ಮುಖಂಡರು ಹಾಗೂ ಅವರ ಕುಟುಂಬದ ಕುರಿತು ಸಣ್ಣ ಟೀಕೆಯನ್ನೂ ಮಾಡುತ್ತಿಲ್ಲ ಎಂದು ಆಂಜನೇಯ ಅವರು ಹೇಳಿದರು.

ಹಳ್ಳಿಗಳಿಗೆ ಸೊಂಕು ಪ್ರವೇಶಿಸಿದ್ದು, ಹಳ್ಳಿಯ ಜನರು ಬಹಳಷ್ಟು ಜಾಗೂರುತೆ ವಹಿಸಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೂಚಿಸುವ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಮಾಸ್ಕ್ ಧರಿಸಬೇಕು. ಸುರಕ್ಷಿತ ಅಂತರ ಇರಬೇಕು. ಸ್ವಚ್ಚತೆಗೆ ಅದ್ಯತೆ ನೀಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಅವರು ಮಾತನಾಡಿ, ರಾಹುಲ್ ಗಾಂಧಿ ಅವರು ಅಧಿಕಾರಕ್ಕಾಗಿ ಎಂದೂ ಹಪಹಪಿಸಿಲ್ಲ. ದೇಶ ಬಲಿಷ್ಠವಾಗಬೇಕು. ರೈತರು, ಕಾರ್ಮಿಕರು, ಅಶಕ್ತ ಜನರು ಶಕ್ತರಾಗಬೇಕು ಎಂದು ಕನಸು ಕಟ್ಟಿಕೊಂಡಿದ್ದಾರೆ. ಇಂತಹ ನಾಯಕ ಪ್ರಧಾನಿ ಆದರೆ ಎಲ್ಲ ವರ್ಗದ ಜನ ನೆಮ್ಮದಿ ಜೀವನ ನಡೆಸಲು ಸಹಕಾರ ಆಗಲಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್ ಸದಸ್ಯ ತಿಪ್ಪೇಶ್, ರಂಗನಾಯಕ, ಲಿಡ್ಕ್‌ರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನರಸಿಂಹರಾಜು, ಕಾಂಗ್ರೆಸ್ ಎಸ್ಸಿ ತಾಲೂಕು ಅಧ್ಯಕ್ಷ ಅನಿಲ್ ಕೋಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಪ್ರಸನ್ನ ಜಯ್ಯಣ್ಣ, ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮಹಡಿ ಶಿವಮೂರ್ತಿ, ತಿಮ್ಮಣ್ಣ, ತಿಪ್ಪೇಸ್ವಾಮಿ, ರಾಜಣ್ಣ ಇತರ ಗಣ್ಯರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News