ಗಂಜಿ ಕೇಂದ್ರಗಳಲ್ಲಿ ಇನ್ನು ಮುಂದೆ ಪೌಷ್ಠಿಕ ಆಹಾರ: ಸಚಿವ ಆರ್.ಅಶೋಕ್

Update: 2021-06-19 17:42 GMT

ಬೆಂಗಳೂರು, ಜೂ. 19: `ಮಳೆ ಅನಾಹುತಗಳು ಸಂಭವಿಸಿದಾಗ ಸ್ಥಳಾಂತರ ಮಾಡಿದವರಿಗೆ ಗಂಜಿ ಕೇಂದ್ರಗಳಲ್ಲಿ ಗಂಜಿ ನೀಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಆ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಗಂಜಿ ಕೇಂದ್ರ ವ್ಯವಸ್ಥೆಯನ್ನ ಸಂಪೂರ್ಣವಾಗಿ ಬದಲಿಸಲಾಗುತ್ತಿದ್ದು, ಪ್ರತಿದಿನ ತರಹೇವಾರಿ ಉಪಹಾರ, ಚಪಾತಿ, ಪಲ್ಯ, ಹಪ್ಪಳ, ಮೊಟ್ಟೆ ನೀಡಲು ಆದೇಶ ನೀಡಲಾಗಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ 20 ಜಿಲ್ಲೆಗಳ ಜಿಲ್ಲಾಡಳಿತದೊಂದಿಗಿನ ವೀಡಿಯೋ ಸಂವಾದ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, `ಮಂಡ್ಯ ಜಿಲ್ಲೆ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಎರಡರಿಂದ ಮೂರು ತಿಂಗಳಲ್ಲಿ ಎಲ್ಲ ಜಲಾಶಯಗಳು ಭರ್ತಿಯಾಗಬಹುದು ಎಂಬ ವಿಶ್ವಾಸವಿದೆ. ಸದ್ಯದಲ್ಲೇ ಮುಂಗಾರು ಆರಂಭವಾಗುತ್ತಿದ್ದು, ಆ ವೇಳೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಅನಾಹುತಗಳು ಘಟಿಸಿದರೆ ಯಾವ ರೀತಿ ನಿರ್ವಹಿಸಬೇಕು ಎಂಬುದರ ಕುರಿತು ಜಿಲ್ಲಾಡಳಿತಗಳಿಗೆ ಮಾಹಿತಿ ನೀಡಲಾಯಿತು. ಮಳೆ ಅನಾಹುತಗಳು ನಡೆದರೆ ಶಾಲೆ, ಕಲ್ಯಾಣ ಮಂಟಪಗಳಿಗೆ ಸ್ಥಳಾಂತರ ಮಾಡಲು ಜಿಲ್ಲಾ, ತಾಲೂಕುಗಳಲ್ಲಿ ಸ್ಥಳ ಗುರುತಿಸಲಾಗಿದೆ. ಹಾಗೆಯೇ ಆ ರೀತಿಯ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 996 ಕೋಟಿ ರೂ.ಹಣವಿದೆ. ಎನ್‍ಡಿಆರ್‍ಎಫ್ ತಂಡ ಅದಾಗಲೇ ಆಗಮಿಸಿದ್ದು, ಉಡುಪಿ, ಚಿಕ್ಕಮಗಳೂರು ಹಾಗೂ ಕಾರವಾರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಆಗಿರುವ ಅನಾಹುತಗಳ ಕುರಿತು ಕೇಂದ್ರದ ತಂಡಕ್ಕೆ ಮಾಹಿತಿ ನೀಡಲಾಗುತ್ತದೆ. ಕಳೆದ ಬಾರಿ ನೆರೆಹಾವಳಿಯಾದಾಗ ಮನೆ ಬಿದ್ದವರಿಗೆ 5ಲಕ್ಷ ರೂ., ಭಾಗಶಃ ಮನೆ ಬಿದ್ದವರಿಗೆ 1 ಲಕ್ಷ ರೂ. ಹಾಗೂ ಮನೆಗೆ ನೀರು ನುಗ್ಗಿದರೆ 10 ಸಾವಿರ ರೂ.ಕೊಡಲಾಗಿತ್ತು. ಈ ಬಾರಿಯೂ ಅದನ್ನೇ ಅನುಸರಿಸಲಾಗುತ್ತದೆ. ಮೊನ್ನೆ ಟೌಟೆ ಚಂಡಮಾರುತದಲ್ಲಿ 300 ಮನೆಗಳು ಬಿದ್ದಿದ್ದು, ಅವರಿಗೂ 5 ಲಕ್ಷ ರೂ. ನೀಡಲು ಇಂದಿನ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ಸಚಿವ ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News