ಸಿಸಿಐ ತನಿಖೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಅಮೆಝಾನ್, ಫ್ಲಿಪ್ ಕಾರ್ಟ್

Update: 2021-06-19 18:04 GMT

ಬೆಂಗಳೂರು, ಜೂ.19: ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಆದೇಶದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಅಮೆಝಾನ್ ಹಾಗೂ ಫ್ಲಿಪ್ ಕಾರ್ಟ್ ಸಂಸ್ಥೆಗಳು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿವೆ.

ಶನಿವಾರ ಮೇಲ್ಮನವಿಯ ಅರ್ಜಿಗಳನ್ನು ನ್ಯಾ.ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರ ಸಂಸ್ಥೆ ಫ್ಲಿಪ್ ಕಾರ್ಟ್ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್ ವಕೀಲ ಹರೀಶ್ ಸಾಳ್ವೆ, ಏಕ ಸದಸ್ಯ ಪೀಠ ಅರ್ಜಿದಾರ ಸಂಸ್ಥೆಗಳ ವಿವರಣೆಯನ್ನು ಸರಿಯಾಗಿ ಗ್ರಹಿಸಿಲ್ಲ ಎಂದರು.

ಅಲ್ಲದೆ, ಇ-ಕಾಮರ್ಸ್ ಎಂದರೆ ಮಾರುಕಟ್ಟೆಯ ಸ್ಥಳಗಳೇ ಹೊರತು ಉತ್ಪಾದನಾ ಕ್ಷೇತ್ರವಲ್ಲ. ದೂರುದಾರರು ಆರೋಪಿಸಿರುವಂತೆ ಇ-ಕಾಮರ್ಸ್ ಸಂಸ್ಥೆ ಎಲ್ಲಿಯೂ ಸ್ಪರ್ಧಾ ಕಾಯ್ದೆ ಉಲ್ಲಂಘಿಸಿಲ್ಲ. ಈ ಅಂಶಗಳನ್ನು ಏಕಸದಸ್ಯ ಪೀಠ ಪರಿಗಣಿಸಿಲ್ಲ ಎಂದು ವಾದಿಸಿದರು. ಬಳಿಕ ಕೆಲ ಕಾಲ ವಾದ ಆಲಿಸಿದ ಪೀಠ, ವಿಚಾರಣೆ ಮುಂದೂಡಿತು.

ಏನಿದು ಪ್ರಕರಣ?: ಅಮೆಝಾನ್ ಮತ್ತು ಫ್ಲಿಪ್‍ಕಾರ್ಟ್ ಇ-ಕಾಮರ್ಸ್ ಸಂಸ್ಥೆಗಳು ಉಳಿದ ವ್ಯಾಪಾರಿಗಳಿಗೆ ಕುತ್ತು ತರುವ ರೀತಿ ಬೆಲೆ ನಿಗದಿ ಮಾಡುತ್ತಿವೆ. ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿರುವ ಜತೆಗೆ, ಆದ್ಯತೆಯ ಮಾರಾಟಗಾರರ ಜೊತೆ ವಿಶೇಷ ಪಾಲುದಾರಿಕೆಯಲ್ಲಿ ತೊಡಗಿವೆ ಎಂದು ಅಖಿಲ ಭಾರತ ವರ್ತಕರ ಮಹಾ ಒಕ್ಕೂಟ (ಸಿಎಐಟಿ) ಹಾಗೂ ದೆಹಲಿ ವ್ಯಾಪಾರ್ ಮಹಾಸಂಘ್ ಆರೋಪಿಸಿತ್ತು.

ತದನಂತರ, ಈ ಸಂಬಂಧ ಸಿಸಿಐಗೆ ದೂರು ನೀಡಿದ್ದವು. ಈ ಹಿನ್ನೆಲೆಯಲ್ಲಿ ಸಿಸಿಐ ಅಮೆಝಾನ್ ಹಾಗೂ ಫ್ಲಿಫ್ ಕಾರ್ಟ್ ವಿರುದ್ಧ ತನಿಖೆಗೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ರದ್ದು ಕೋರಿ ಇ-ಕಾಮರ್ಸ್ ಸಂಸ್ಥೆಗಳು ಜ.13ರಂದು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News