ಕಲಬುರಗಿ: ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತೆಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯ ಮತ್ತೊಂದು ಕೃತ್ಯ ಬಯಲು

Update: 2021-06-20 06:34 GMT
ಪ್ರೇಮ್ ಸಾಗರ್ 

ಕಲಬುರಗಿ, ಜೂ.20: ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಕೋವಿಡ್ ಸೋಂಕಿತ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಬಂಧಿತ ಆ್ಯಂಬುಲೆನ್ಸ್ ಚಾಲಕ ಪ್ರೇಮ್ ಸಾಗರ್ ಅಲಿಯಾಸ್ ಪಿಂಟು ಎಂಬಾತನ ಇಂತಹದ್ದೇ ಇನ್ನೊಂದು ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಜೂ.8ರಂದು ಮಧ್ಯರಾತ್ರಿ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ 25 ವರ್ಷದ ಕೋವಿಡ್ ಸೋಂಕಿತ ಮಹಿಳಾ ರೋಗಿಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಪ್ರೇಮ್ ಸಾಗರ್ ನನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ. ಈತ ಇದಕ್ಕೂ ಮೊದಲೊಮ್ಮೆ ಇದೇ ಆಸ್ಪತ್ರೆಯಲ್ಲಿ ಇಂತಹದ್ದೇ ಕೃತ್ಯ ಎಸಗಿ ಸಿಕ್ಕಿಬಿದ್ದು, ಒದೆ ತಿಂದಿರುವ ವಿಡಿಯೋಯೊಂದು ಇದೀಗ ಬಹಿರಂಗವಾಗಿದೆ.

ನಾಲ್ಕು ತಿಂಗಳ ಹಿಂದೆ ಆರೋಪಿ ಪ್ರೇಮ್ ಸಾಗರ್ ಜಿಮ್ಸ್ ಆಸ್ಪತ್ರೆಯ ಲಿಫ್ಟ್ ನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನೆನ್ನಲಾಗಿದೆ. ಅಂದು ಆಸ್ಪತ್ರೆಯ ಸಿಬ್ಬಂದಿ ಈತನಿಗೆ ಎರಡೇಟು ಬಿಗಿದು ಬುದ್ಧಿಮಾತು ಹೇಳಿ ಎಚ್ಚರಿಕೆ ನೀಡಿ ಪೊಲೀಸರಿಗೆ ಒಪ್ಪಿಸದೆ ಬಿಟ್ಟಿದ್ದರು ಎಂದು ತಿಳಿದುಬಂದಿದೆ.

ಮತ್ತೆ ಅದೇ ಚಾಳಿ ಮುಂದುವರಿಸಿದ ಆರೋಪಿ ಪ್ರೇಮ್ ಸಾಗರ್ ಎರಡನೇ ಬಾರಿ ಜೂ.9ರಂದು ಕೋವಿಡ್ ಪೀಡಿತ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊನೆಗೂ ಪೊಲೀಸ್ ಕೈಗೆ ಸಿಕ್ಕಿಬಿದ್ದಾನೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಷ್ಕೃತ್ಯ ಎಸಗಿ ಮೊದಲ ಬಾರಿ ಸಿಕ್ಕಿಬಿದ್ದಿದ್ದ ಆರೋಪಿಯನ್ನು ಆಸ್ಪತ್ರೆಯವರು ಅಂದೇ ಪೊಲೀಸರಿಗೆ ಒಪ್ಪಿಸಿದ್ದರೆ ಅಂತಹ ಘಟನೆ ಮರುಕಳಿಸುತ್ತಿರಲಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಈ ನಡುವೆ ಜೂ.8ರಂದು ರಾತ್ರಿ ಪ್ರೇಮ್ ಸಾಗರ್ ನಿಂದ ಅತ್ಯಾಚಾರ ಯತ್ನಕ್ಕೊಳಗಾಗಿದ್ದಳೆನ್ನಲಾದ ಮಹಿಳೆ ಜೂ.16ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೋವಿಡ್ ಸೋಂಕಿತ ಮಹಿಳೆ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿರುವುದಾಗಿ ಜಿಮ್ಸ್ ಆಸ್ಪತ್ರೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News