ಭದ್ರಾ ಮೇಲ್ದಂಡೆ ಯೋಜನೆ ಟೆಂಡರ್ ಅಕ್ರಮ ಆರೋಪ: ತನಿಖೆ ಅಗತ್ಯವಿಲ್ಲ ಎಂದ ಗೃಹ ಸಚಿವ ಬೊಮ್ಮಾಯಿ

Update: 2021-06-20 12:25 GMT

ಬೆಂಗಳೂರು, ಜೂ. 21: `ಚಿತ್ರದುರ್ಗ, ತುಮಕೂರು ಸೇರಿದಂತೆ ಬಯಲುಸೀಮೆಯ ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಗುತ್ತಿಗೆ ನೀಡಲೆಂದು ಕರೆದಿರುವ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿದ್ದು, ತನಿಖೆಯ ಅಗತ್ಯವಿಲ್ಲ' ಎಂದು ಗೃಹ ಸಚಿವ ಬಸವರಾಜ್ ಬೊಮ್ಮಯಿ ಇಂದಿಲ್ಲಿ ಪ್ರತಿಪಕ್ಷಗಳ ಆಗ್ರಹವನ್ನು ತಿರಸ್ಕರಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಈಗಾಗಲೇ ಟೆಂಡರ್ ಪ್ರಕ್ರಿಯೆಯ ವಾಸ್ತವ ಅಂಶವನ್ನು ತಿಳಿಸಿದ್ದಾರೆ. ಸತ್ಯಾಸತ್ಯತೆ ಗೊತ್ತಾದ ಬಳಿಕ ತನಿಖೆಯ ಅಗತ್ಯವಿಲ್ಲ. ಹಿಂದಿನ ಸರಕಾರಗಳು ಅನುಸರಿಸಿದ ಕೆಟಿಪಿಪಿ ಕಾಯ್ದೆಯಡಿ ಕ್ರಮವಹಿಸಿದ್ದು, ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ, ಹೀಗಾಗಿ ತನಿಖೆ ಅನಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಕಾಮಗಾರಿ ಟೆಂಡರ್ ಗೆ ಯಾವ ಪದ್ಧತಿಗಳನ್ನು ಅನುಸರಿಸಲಾಗುತ್ತಿತ್ತೊ ಈಗಲೂ ಅದೇ ಪ್ರಕಾರ ನಡೆಯುತ್ತಿದೆ. ಕೆಟಿಟಿಪಿ ಕಾಯ್ದೆ ಪ್ರಕಾರವೇ ಟೆಂಡರ್ ಪ್ರಕ್ರಿಯೆ ನಡೆದಿದೆ. ಎಲ್ಲವೂ ಪಾರದರ್ಶಕವಾಗಿದೆ. ವಿರೋಧ ಪಕ್ಷಗಳು ಆರೋಪ ಮಾಡುವುದು ಸಹಜ. ಅಕ್ರಮ ಆಪಾದನೆ ಕೇಳಿ ಬಂದ ತಕ್ಷಣವೇ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ದಾಖಲೆಗಳ ಸಹಿತ ಸತ್ಯಾಂಶ ಬಹಿರಂಗಪಡಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಪಾರದರ್ಶಕತೆ ಹೊಂದಿರುವುದು ಜಗಜ್ಜಾಹೀರಾಗಿರುವ ಕಾರಣ ತನಿಖೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಅವರ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡೆಯುತ್ತಿದೆ. ಬೆಲ್ಲದ್ ಜತೆಗೆ ತನಿಖಾಧಿಕಾರಿ ಮಾತನಾಡಿದ್ದಾರೆಂದು ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ನಾಲ್ಕು ದಿನಗಳ ಹಿಂದೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಾನೂನು ಪಾರಿಪಾಲನೆ ಮಾಡದೆ, ಟೆಂಡರ್ ನೀಡಲಾಗಿದ್ದು, ಶೇ.10ರಷ್ಟು ಕಮಿಷನ್ ಪಡೆಯಲಾಗಿದೆ ಎಂದು ಆರೋಪಿಸಿ, ಈ ಸಂಬಂಧ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಅಲ್ಲದೆ, ಇದರಲ್ಲಿ ಸಿಎಂ ಪುತ್ರ ವಿಜಯೇಂದ್ರ ಕಿಕ್‍ಬ್ಯಾಕ್ ಪಡೆದಿದ್ದಾರೆಂದು ದೂರಿದ್ದರು. ಆದರೆ, ಈ ಆರೋಪವನ್ನು ಸಚಿವ ಬೊಮ್ಮಾಯಿ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News