ಒಳ್ಳೆಯ ಕಾಲೇಜಿಗೆ ಸೇರಿಸಲಿಲ್ಲವೆಂದು ವಿದ್ಯಾರ್ಥಿನಿ ಆತ್ಮಹತ್ಯೆ: ಹೃದಯಾಘಾತದಿಂದ ಮೃತಪಟ್ಟ ತಂದೆ

Update: 2021-06-20 12:39 GMT

ಮಂಡ್ಯ, ಜೂ.20: ಮಗಳ ಆತ್ಮಹತ್ಯೆಯಿಂದ ಆಘಾತಗೊಂಡ ತಂದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ರವಿವಾರ ನಡೆದಿದೆ.

ಗ್ರಾಮದ ರಾಜಣ್ಣ (65) ಹಾಗೂ ಪುತ್ರಿ ಬಾಂಧವ್ಯ (17) ಸಾವನ್ನಪ್ಪಿದವರು. 'ವಿಶ್ವ ಅಪ್ಪಂದಿರ ದಿನ'ವೇ ಈ ದುರ್ಘಟನೆ ಸಂಭವಿಸಿದ್ದು, ಅಪ್ಪ-ಮಗಳ ಅಂತ್ಯಸಂಸ್ಕಾರ ಒಟ್ಟಿಗೆ ನೆರವೇರಿತು.

ರಾಜಣ್ಣನಿಗೆ 4 ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಇದ್ದಾನೆ.‌ ನಾಲ್ಕನೆಯವಳಾದ ಬಾಂಧವ್ಯ ಬನ್ನೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಬಾಂಧವ್ಯಳನ್ನು ತಂದೆ ಸರಕಾರಿ ಕಾಲೇಜಿಗೆ ಸೇರಿಸಿದ್ದರು. ಆದರೆ ತನ್ನನ್ನು ಒಳ್ಳೆಯ ಕಾಲೇಜಿಗೆ ಸೇರಿಸಲಿಲ್ಲವೆಂದು ಖಿನ್ನತೆಗೊಳಗಾಗಿದ್ದ ಬಾಂಧವ್ಯ ರವಿವಾರ ಮುಂಜಾನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಮಗಳ ಅಂತ್ಯಸಂಸ್ಕಾರದ ಸಿದ್ಧತೆಯಲ್ಲಿದ್ದಾಗ ತಂದೆ ರಾಜಣ್ಣ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.

ಬಾಂಧವ್ಯಳ ಮೂವರು ಅಕ್ಕಂದಿರಲ್ಲಿ ಇಬ್ಬರು ಎಂ.ಎಸ್ಸಿ, ಒಬ್ಬಳು ಬಿಎಸ್ಸಿ. ಬಿಎಡ್ ಪದವೀಧರರು. ಆತ್ಮಹತ್ಯೆಗೆ ಶರಣಾದ ಬಾಂಧವ್ಯ 10ನೇ ತರಗತಿಯಲ್ಲಿ ಶೇ.97 ಅಂಕಗಳಿಸಿದ್ದು, ಬನ್ನೂರಿನ ಸರಕಾರಿ ಪದವಿಪೂರ್ವ ಕಾಲೇಜಿಗೆ ವಿಜ್ಞಾನ ವಿಭಾಗಕ್ಕೆ ಸೇರಿಸಲಾಗಿತ್ತು. ಅಲ್ಲಿಯೇ ಬಿಸಿಎಂ ಹಾಸ್ಟೆಲ್ ನಲ್ಲಿ ಇದ್ದಳು. ಲಾಕ್ಡೌನ್ ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿ ನಡೆಯುತಿತ್ತು. ತನ್ನನ್ನು ಒಳ್ಳೆಯ ಕಾಲೇಜಿಗೆ ಸೇರಿಸಲಿಲ್ಲವೆಂದು ಆಕೆ ಖಿನ್ನತೆಗೊಳಗಾಗಿದ್ದಳು ಎಂದು ಆಕೆಯ ಪೋಷಕರು 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News