ಸೋಮವಾರದಿಂದ ಲಾಕ್‍ಡೌನ್ ಸಡಿಲಿಕೆ: ಬಹುತೇಕ ವಾಣಿಜ್ಯ ಚಟುವಟಿಕೆಗಳು, ಬಸ್, ಮೆಟ್ರೋ ಸಂಚಾರ ಆರಂಭ

Update: 2021-06-20 14:01 GMT

ಬೆಂಗಳೂರು, ಜೂ. 21: ಕೋವಿಡ್-19 ಸೋಂಕು ತಡೆಗಟ್ಟಲು ಹೇರಿದ್ದ ಸುದೀರ್ಘ ಅವಧಿಯ ಕೊರೋನ ಕರ್ಫ್ಯೂ, ಲಾಕ್‍ಡೌನ್‍ನಿಂದ ಸ್ತಬ್ಧವಾಗಿದ್ದ ರಾಜ್ಯದ ವಿವಿಧ ಜಿಲ್ಲೆಗಳು, ನಿರ್ಬಂಧ ಸಡಿಲಿಕೆ ಹಿನ್ನೆಲೆಯಲ್ಲಿ ನಾಳೆ(ಜೂ.21)ಯಿಂದ ಸಹಜ ಸ್ಥಿತಿಗೆ ಮರಳಲಿವೆ.

ಎರಡು ತಿಂಗಳಿಂದ ಮುಚ್ಚಿದ್ದ ಬಹುತೇಕ ವಾಣಿಜ್ಯ ಚಟುವಟಿಕೆಗಳು ಪುನರ್ ಆರಂಭವಾಗಲಿದ್ದು, ಗೃಹ ಬಂಧನದಲ್ಲಿದ್ದ ಜನಸಾಮಾನ್ಯರು ನಿರ್ಬಂಧದಿಂದ ಹೊರಬರುವ ತವಕದಲ್ಲಿದ್ದಾರೆ. ನಾಳೆಯಿಂದಲೇ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಆಟೋ ರಿಕ್ಷಾ, ಟ್ಯಾಕ್ಸಿ, ಮೆಟ್ರೋ ರೈಲು ಸಂಚಾರ ಆರಂಭವಾಗಲಿದ್ದು, ಬಹುತೇಕ ವಾಹನಗಳು ರಸ್ತೆಗಿಳಿಯುವ ಸಾಧ್ಯತೆಗಳಿವೆ.

ಕೋವಿಡ್ ಸೋಂಕು ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ(ಬಿಬಿಎಂಪಿ), ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿದ್ದು, ಬೆಳಗ್ಗೆ 6ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಎರಡನೆ ಹಂತದಲ್ಲಿ ಹೋಟೆಲ್ ಸೇವೆಗೆ ಅವಕಾಶ ನೀಡಲಾಗಿದ್ದು, ಹೋಟೆಲ್, ಕ್ಲಬ್ ಮತ್ತು ರೆಸ್ಟೋರೆಂಟ್‍ಗಳಲ್ಲಿ(ಮದ್ಯಪಾನ ಹೊರತುಪಡಿಸಿ) ಶೇ.50ರಷ್ಟು ಗ್ರಾಹಕರಿಗೆ ಕೂತು ತಿನ್ನಲು ಸಂಜೆ 5ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಲಾಡ್ಜ್ ಗಳಲ್ಲಿ ಮತ್ತು ರೆಸಾರ್ಟ್ ಗಳಲ್ಲಿ ಶೇ.50 ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್‍ಗಳಿಗೆ ಹಾಗೂ ಮೆಟ್ರೋ ರೈಲು ಸಂಚಾರಕ್ಕೂ ಅವಕಾಶ ನೀಡಲಾಗಿದೆ. ಬಸ್ ಮತ್ತು ಮೆಟ್ರೋ ಶೇ.50ರ ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಣೆ ಮಾಡಬೇಕೆಂದು ನಿರ್ಬಂಧ ಹೇರಲಾಗಿದೆ.

ಸರಕಾರಿ, ಖಾಸಗಿ ಕಚೇರಿಗಳಿಗೆ ಶೇ.50ರ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಜುಲೈ 5ರ ವರೆಗೂ ದೇವಸ್ಥಾನ, ಮಸೀದಿಗಳಿಗೆ ನಿರ್ಬಂಧವನ್ನು ಮುಂದುವರಿಸಲಾಗಿದೆ. ಹೊರಾಂಗಣ ಕ್ರೀಡೆಗಳಿಗೆ (ವೀಕ್ಷಕರಿಲ್ಲದೆ) ಅನುಮತಿ ನೀಡಲಾಗಿದೆ. ಜಿಮ್‍ಗಳಲ್ಲಿ ಶೇ.50ರಷ್ಟು ಸಾಮರ್ಥ್ಯದೊಂದಿಗೆ(ಎಸಿ ಇಲ್ಲದೆ) ಕಾರ್ಯಾಚರಣೆ ನಡೆಸಲು ಅವಕಾಶ ನೀಡಲಾಗಿದೆ. ಹೊರಾಂಗಣ ಚಿತ್ರೀಕರಣಕ್ಕೆ(ಧಾರಾವಾಹಿ, ಸಿನಿಮಾ) ಅನುಮತಿ ನೀಡಲಾಗಿದೆ.

ನಿರ್ಬಂಧ: ಈಜುಕೊಳ, ಸಭೆ ಸಮಾರಂಭ, ರಾಜಕೀಯ ಸಮಾವೇಶ, ಶಾಲೆ-ಕಾಲೇಜುಗಳು ಇರುವುದಿಲ್ಲ. ಅಲ್ಲದೆ, ಸಿನಿಮಾ ಮಂದಿರಗಳು, ಶಾಪಿಂಗ್ ಮಾಲ್, ಎಸಿ ಶಾಪಿಂಗ್ ಕಾಂಪ್ಲೆಕ್ಸ್ ಗಳು, ಕ್ಲಬ್, ಪಬ್‍ಗಳು ಬೆಂಗಳೂರಿಲ್ಲಿ ಬಂದ್ ಆಗಿರುತ್ತದೆ. ಬೆಂಗಳೂರು ನಗರದಲ್ಲಿ ವಾರದಲ್ಲಿ 5 ದಿನ ಅನ್‍ಲಾಕ್ ಮಾಡಲಾಗಿದೆ. ಆದರೆ, ವಾರಂತ್ಯದ ಕರ್ಫ್ಯೂ ಇರಲಿದ್ದು, ಶುಕ್ರವಾರ ಸಂಜೆ 7ಗಂಟೆಯಿಂದ ಸೋಮವಾರ ಬೆಳಗ್ಗೆ 5ರ ವರೆಗೆ ಕೋವಿಡ್ ಕರ್ಫ್ಯೂ ಜಾರಿಯಲ್ಲಿರಲಿದೆ.

ಪಾಜಿಟಿವಿಸಿ ದರ ಶೇ.5ಕ್ಕಿಂತ ಹೆಚ್ಚಿರುವ ಉಡುಪಿ, ಹಾಸನ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಸೇರಿ 12 ಜಿಲ್ಲೆಗಳಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರ ವರೆಗೆ ಅಗತ್ಯ ವಸ್ತು ಖರೀದಿಗೆ, ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2ರ ವರೆಗೆ ಹೊಟೇಲ್, ಮದ್ಯದಂಗಡಿಗಳಿಂದ ಪಾರ್ಸಲ್ ಸೇವೆಗೆ ಮಾತ್ರ ಅನುವು ಮಾಡಲಾಗಿದೆ. ಆದರೆ ದ.ಕ. ಜಿಲ್ಲೆಯಲ್ಲಿ ಸೋಮವಾರದಿಂದ ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ಕಲ್ಪಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕೋವಿಡ್ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿರುವ ಸಾಂಸ್ಕೃತಿಕ ನಗರಿ ಮೈಸೂರು ನಗರದಲ್ಲಿ ಜುಲೈ 5ರ ವರೆಗೆ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿದ್ದು, ಬೆಳಗ್ಗೆ 6ರಿಂದ 10 ಗಂಟೆಯ ವರೆಗೆ ಮಾತ್ರ ಹಾಲು, ತರಕಾರಿ, ದಿನಸಿ ಸಹಿತ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News