ಕ್ರೀಡಾಪಟುಗಳು ಸೇರಿ ವಿದೇಶಕ್ಕೆ ಹೋಗುವವರೆಲ್ಲರಿಗೂ ಜೂ.22ರಿಂದ ಲಸಿಕೀಕರಣ: ಡಾ.ಅಶ್ವತ್ಥ ನಾರಾಯಣ

Update: 2021-06-20 15:59 GMT

ಬೆಂಗಳೂರು, ಜೂ. 20: ವ್ಯಾಸಂಗ ಅಥವಾ ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವವರಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು ಆವರಣದಲ್ಲಿ ಇದೇ 22ರಿಂದ ಕೋವಿಡ್ ಲಸಿಕೆ ಹಾಕಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಟೊಕಿಯೋದಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟಕ್ಕೆ ತೆರಳುವ ಕ್ರೀಡಾಪಟುಗಳು ಸೇರಿ ವಿದೇಶಕ್ಕೆ ವ್ಯಾಸಂಗ-ಉದ್ಯೋಗಕ್ಕೆ ತೆರಳುವ ಎಲ್ಲರೂ ಇಲ್ಲಿ ಬಂದು ಲಸಿಕೆ ಪಡೆಯಬಹುದು. ಮಂಗಳವಾರ ಬೆಳಗ್ಗೆ 10.30ರಿಂದ ಲಸಿಕೆ ನೀಡಲಾಗುವುದು ಎಂದರು.

ಈ ಮೊದಲೇ ಸೆಂಟ್ರಲ್ ಕಾಲೇಜ್‍ನಲ್ಲಿ ವಿದೇಶಕ್ಕೆ ತೆರಳುವ 1,500ಕ್ಕೂ ಹೆಚ್ಚು ವಿದ್ಯಾರ್ಥಿ, ಉದ್ಯೋಗಿಗಳಿಗೆ ಮೊದಲ ಡೋಸ್ ಕೊಡಲಾಗಿದೆ. ಇದಕ್ಕಾಗಿ ಪಾಲಿಕೆಯ 8 ವಲಯಗಳ ಆಯುಕ್ತರನ್ನು `ಸಮರ್ಥ ಅಧಿಕಾರಿ' (competent authority)ಗಳನ್ನಾಗಿ ನೇಮಿಸಲಾಗಿದ್ದು, ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಪೂರ್ವ ವಲಯದ ಆರೋಗ್ಯಾಧಿಕಾರಿಯನ್ನು `ಸಮರ್ಥ ಅಧಿಕಾರಿ' ಎಂದು ಗುರುತಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಈ ವರ್ಗದ ಜನರಿಗೆ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ 28 ದಿನಗಳಲ್ಲೇ ಎರಡನೇ ಡೋಸ್ ನೀಡಲಾಗುವುದು. ಲಸಿಕೆ ಕೇಂದ್ರಕ್ಕೆ ಬರುವ ಅರ್ಹ ಲಸಿಕಾ ಆಕಾಂಕ್ಷಿಗಳ ಸ್ವಯಂ ಘೋಷಣಾ ಪತ್ರ ಸೇರಿ ಇತರೆ ದಾಖಲೆಗಳನ್ನು ಪರಿಶೀಲಿಸಬೇಕು. ಲಸಿಕೆ ಪಡೆದ ದೃಢೀಕರಣ ಪತ್ರವನ್ನು ತಕ್ಷಣೇ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಿಸಬೇಕು ಎಂದು ಅವರು ಹೇಳಿದರು.

ಈಗಾಗಲೇ ಮೊದಲ ಡೋಸ್ ಪಡೆದಿರುವವರು ತಮ್ಮ ಪಾಸ್‍ ಪೋರ್ಟ್ ಸಂಖ್ಯೆಯನ್ನು ದಾಖಲು ಮಾಡಿರದಿದ್ದರೆ ಎರಡನೇ ಡೋಸ್ ಪಡೆಯಲು ಬರುವಾಗ ಕಡ್ಡಾಯವಾಗಿ ದಾಖಲಿಸಿಕೊಳ್ಳಬೇಕು ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News