ಸಂತ್ರಸ್ತ ಕುಟುಂಬಕ್ಕೆ 3.20 ಲಕ್ಷ ರೂ. ಪರಿಹಾರ ಕಲ್ಪಿಸಿದ ಕಲಬುರಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ

Update: 2021-06-20 16:36 GMT

ಬೆಂಗಳೂರು, ಜೂ. 20: ಸತತ ಎರಡು ವರ್ಷಗಳ ಕಾನೂನು ಹೋರಾಟದ ಫಲವಾಗಿ ಕಲಬುರಗಿಯಲ್ಲಿ ಹತ್ಯೆಗೀಡಾಗಿದ್ದ ಇಮ್ತಿಯಾಝ್ ಅವರ ಕುಟುಂಬಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು 3.20 ಲಕ್ಷ ರೂ.ಗಳ ಪರಿಹಾರ ಕಲ್ಪಿಸಿಕೊಟ್ಟಿದೆ.

2017ರ ಡಿ.31ರಂದು ಕಲಬುರಗಿ ಜಿಲ್ಲೆಯ ಸೋನಿಯಾಗಾಂಧಿ ಕಾಲನಿ ನಿವಾಸಿ ಇಮ್ತಿಯಾಝ್ ಹೊಸ ವರ್ಷದ ಆಚರಣೆಗಾಗಿ ತನ್ನ ನಾಲ್ವರು ಸ್ನೇಹಿತ(ಓರ್ವ ಅಪ್ರಾಪ್ತ)ರೊಂದಿಗೆ ಹೊರಗೆ ಹೋಗಿದ್ದ. ಈ ಸಂದರ್ಭದಲ್ಲಿ ಸ್ನೇಹಿತರ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿ, ನಾಲ್ವರು ಸ್ನೇಹಿತರು ಇಮ್ತಿಯಾಝ್ ನನ್ನು ದೊಣ್ಣೆ ಹಾಗೂ ಕಲ್ಲುಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದರು. ಇದರಿಂದ ಆತನ ತಲೆಗೆ ಗಂಭೀರವಾದ ಪೆಟ್ಟಾಗಿತ್ತು.

ತಕ್ಷಣ ಇಮ್ತಿಯಾಝ್ ನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆನಂತರ, ಹೆಚ್ಚಿನ ಚಿಕಿತ್ಸೆಗಾಗಿ 2018ರ ಜ.6ರಂದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ತದನಂತರ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಜ.15ರಂದು ರಾತ್ರಿ 11.50ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಇಮ್ತಿಯಾಝ್ ಕೊನೆಯುಸಿರೆಳೆದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಮೊದಲನೆ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರ ಎದುರು ವಾದ, ಪ್ರತಿವಾದ ನಡೆದು, 2020ರ ಜ.7ರಂದು ಮೂವರು ಆರೋಪಿಗಳಿಗೆ ನ್ಯಾಯಾಲಯವು ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತು. ಆದರೆ, ಇಮ್ತಿಯಾಝ್ ಕುಟುಂಬಕ್ಕೆ ಯಾವುದೆ ಪರಿಹಾರವನ್ನು ಘೋಷಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಮಾನವ ಹಕ್ಕುಗಳ ಹೋರಾಟಗಾರ ಮುಹಮ್ಮದ್ ರಿಯಾಝುದ್ದೀನ್ ಅವರ ತಂಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯವಾದಿ ಸಿದ್ದಪ್ಪ ಸಿ.ಪೂಜಾರಿ ಅವರ ಮೂಲಕ ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ಮಾಡಿದ ಪರಿಣಾಮವಾಗಿ ಪ್ರಸಕ್ತ ಸಾಲಿನ ಜೂ.18ರಂದು ನ್ಯಾಯಾಲಯವು ಇಮ್ತಿಯಾಝ್ ಅವರ ತಂದೆ ಹಾಗೂ ತಾಯಿಯ ಹೆಸರಿನಲ್ಲಿ ತಲಾ 1.60 ಲಕ್ಷ ರೂ.(ಒಟ್ಟು 3.20 ಲಕ್ಷ ರೂ.)ಗಳ ಪರಿಹಾರದ ಚೆಕ್ ಅನ್ನು ನೀಡಿದೆ.

ನ್ಯಾಯಾಲಯದ ಮೂಲಕ ಸಂತ್ರಸ್ತನ ಕುಟುಂಬಕ್ಕೆ ನ್ಯಾಯಾ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮುಹಮ್ಮದ್ ರಿಯಾಝುದ್ದೀನ್, ಕಲಬುರಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು, ನ್ಯಾಯವಾದಿ ಸಿದ್ದಪ್ಪ ಸಿ.ಪೂಜಾರಿ, ನ್ಯಾಯಮೂರ್ತಿ ಸುಕ್ಲಾಕ್ಷ ಪಾಲನ್, ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯ ತನಿಖಾಧಿಕಾರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News