ಕೋವಿಡ್ ಸಮರ್ಪಕ ನಿರ್ವಹಣೆಗೆ ಸಿಎಂ ಬಿಎಸ್‌ವೈಗೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ

Update: 2021-06-20 16:51 GMT

ಬೆಂಗಳೂರು, ಜೂ. 20: `ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ನಾಳೆ(ಜೂ.21)ಯಿಂದ ಹಮ್ಮಿಕೊಂಡಿರುವ ಕೋವಿಡ್ ಲಸಿಕಾ ಮೇಳವನ್ನು ಯಶಸ್ವಿಗೊಳಿಸುವ ಮೂಲಕ ಕೋವಿಡ್ ಸೋಂಕಿನ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಜೊತೆಗೆ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಬೇಕು' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸೂಚನೆ ನೀಡಿದ್ದಾರೆ.

ರವಿವಾರ ಹೊಸದಿಲ್ಲಿಯಿಂದ ವಿಡಿಯೋ ಸಂವಾದ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿದ ಅವರು, ಕೋವಿಡ್ ಸಂಕಷ್ಟ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ಕಷ್ಟದಲ್ಲಿರುವ ಜನ ಸಾಮಾನ್ಯರೊಂದಿಗೆ ನಿಲ್ಲಬೇಕು. ಎಲ್ಲ ವರ್ಗದ ಜನರಿಗೆ ಲಸಿಕೆ ಕೊಡಿಸುವ ಮೂಲಕ ಪಕ್ಷ ಸಂಘಟನೆ ಚಟುವಟಿಕೆಗಳು ಬೂತ್ ಮಟ್ಟಕ್ಕೆ ತಲುಪಿಸಬೇಕು ಎಂದು ಸಲಹೆ ಮಾಡಿದರು.

ಮುಂಬರುವ ಚುನಾವಣೆಗಳಲ್ಲಿ ಕೋವಿಡ್ ವಿಚಾರ ಪ್ರಮುಖವಾಗಲಿದ್ದು, ಅದರ ನಿರ್ವಹಣೆಯಲ್ಲಿ ಯಶಸ್ವಿಯಾದರೆ ಮಾತ್ರ ಪಕ್ಷಕ್ಕೆ ಲಾಭವಾಗಲಿದೆ. ಕೋವಿಡ್ ಮಾರ್ಗಸೂಚಿ ಅನುಸರಿಸಿ ಪಾಲಿಸಿ ಪ್ರತಿ ತಾಲೂಕಿನಲ್ಲೂ ಯೋಗ ದಿನ ಆಚರಿಸಬೇಕು. ಗಣ್ಯರು ಸೇರಿದಂತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡಬೇಕು ಎಂದು ನಡ್ಡಾ ಇದೇ ವೇಳೆ ಸಿಎಂ ಸಲಹೆ ಮಾಡಿದ್ದಾರೆಂದು ಗೊತ್ತಾಗಿದೆ.

ಜೂ.23ಕ್ಕೆ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ ಮತ್ತು ಜು.6ರಂದು ಅವರ ಜನ್ಮದಿನವಿದೆ. ಈ ಅವಧಿಯಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಅಲ್ಲದೆ, ಅವರ ಜೀವನ ತತ್ವಗಳನ್ನು ಜನರಿಗೆ ತಿಳಿಸಬೇಕೆಂದು ಅವರು ಸೂಚಿಸಿದ್ದಾರೆ. ರಾಜ್ಯದಲ್ಲಿ 5ರಿಂದ 7 ಲಕ್ಷ ಮಂದಿಗೆ ಲಸಿಕೆ ನೀಡಲು ರಾಜ್ಯ ಸರಕಾರ ಉದ್ದೇಶಿಸಿದ್ದು, ನಾಳೆ(ಜೂ.21) ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಸಿಎಂ ಲಸಿಕಾ ಮಹಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News