ಸಿದ್ದರಾಮಯ್ಯ ಸಿಎಂ ಎಂದು ಹೇಳುವ ಸಮಯ ಇದಲ್ಲ: ಝಮೀರ್ ಹೇಳಿಕೆಗೆ ಧ್ರುವನಾರಾಯಣ ತಿರುಗೇಟು

Update: 2021-06-20 17:37 GMT

ಮೈಸೂರು,ಜೂ.20: ಶಾಸಕ ಝಮೀರ್ ಅಹ್ಮದ್ ಖಾನ್ ಜೆಡಿಎಸ್ ನಲ್ಲಿ ಇದ್ದಾಗ ಕುಮಾರಣ್ಣ ಮುಖ್ಯಮಂತ್ರಿ ಅನ್ನುತ್ತಿದ್ದರು, ಈಗ ಕಾಂಗ್ರೆಸ್‍ನಲ್ಲಿದ್ದು ಸಿದ್ದರಾಮಣ್ಣ ಮುಖ್ಯಮಂತ್ರಿ ಅನ್ನುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಭಾವಿ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿರುವ ಶಾಸಕ ಝಮೀರ್ ಅಹ್ಮದ್ ಬಗ್ಗೆ ಪ್ರತಿಕ್ರಿಯಿಸಿ, 'ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೇಳುವ ಸಮಯವಲ್ಲ. ಈ ರೀತಿಯ ಹೇಳಿಕೆಯಿಂದ ಪಕ್ಷದ ನಾಯಕರಿಗೆ ಮುಜುಗರ ಉಂಟು ಮಾಡುತ್ತದೆ. ಹಾಗಾಗಿ ಈ ರೀತಿಯ ಹೇಳಿಕೆಗಳು ಅಪ್ರಸ್ತುತ ಎಂದು ಹೇಳಿದರು.

ಕಾಂಗ್ರೆಸ್‍ನಲ್ಲಿ ಯಾವ ಬಣವೂ ಇಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಶಾಸಕಾಂಗ ಪಕ್ಷದ ಸಭೆ ನಡೆಸಿ ಮುಖ್ಯಮಂತ್ರಿ ಯಾರು ಎಂದು ತೀರ್ಮಾನ ಮಾಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು, ಹಾಗಾಗಿ ಈ ಸಂದರ್ಭದಲ್ಲಿ ನಾಯಕತ್ವದ ಪ್ರಶ್ನೆ ಎತ್ತಬಾರದು. ಹಾಗಾಗಿ ಝಮೀರ್ ಅಹ್ಮದ್ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಪಕ್ಷಕ್ಕೆ ಇಲ್ಲ, ಬಿಜೆಪಿಯವರಿಗೆ ನಾಚಿಕೆಯಾಗಬೇಕು, ಕೋವಿಡ್ ಸಂದರ್ಭದಲ್ಲಿ ಜನರ ಕಷ್ಟ-ಸುಖದಲ್ಲಿ ಭಾಗಿಯಾಗುವುದನ್ನು ಬಿಟ್ಟು ಅಧಿಕಾರಕ್ಕಾಗಿ ಪರ ವಿರೋಧ ಕೆಸೆರೆರಚಾಟದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು.

ಶಾಸಕ ಝಮೀರ್ ಅಹ್ಮದ್ ಖಾನ್ ಅವರಿಗೆ ನೋಟಿಸ್ ನೀಡಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್.ಧ್ರುವನಾರಾಯಣ, ನೋಟಿಸ್ ನೀಡುವ ವಿಚಾರ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News