ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಂದ ಉಚಿತ ಶಿಕ್ಷಣ

Update: 2021-06-20 17:44 GMT

ಬೆಂಗಳೂರು, ಜೂ. 20: ಕೋವಿಡ್ ಸೋಂಕಿನಿಂದ ಪೋಷಕರನ್ನು(ತಂದೆ-ತಾಯಿ) ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಂದ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಅದ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಪೋಷಕರು ಆರ್ಥಿಕವಾಗಿ ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಕಳೆದ ವರ್ಷವೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶಾಲಾ ಶುಲ್ಕವನ್ನು ಹೆಚ್ಚಿಸಿಲ್ಲ. ಈ ವರ್ಷವೂ ಹಿಂದಿನ ಶುಲ್ಕವನ್ನೇ ಪಡೆಯಲಾಗುವುದೆಂದು ತಿಳಿಸಿದ್ದಾರೆ. 

ರಾಜ್ಯದ ಶೇ.90ಕ್ಕಿಂತ ಹೆಚ್ಚು ಖಾಸಗಿ ಶಾಲೆಗಳು ರಾಜ್ಯ ಸರಕಾರ ಘೋಷಿಸಿದ ಶುಲ್ಕವನ್ನು ಒಪ್ಪಿಕೊಂಡಿವೆ. ಆದರೂ ಶೇ.50ರಷ್ಟು ಪೋಷಕರು ಶುಲ್ಕವನ್ನು ಕಟ್ಟದೆ ಬಾಕಿ ಉಳಿಸಿಕೊಂಡಿದ್ದಾರೆ. ಹಾಗೂ 2019-20ರ ಸಾಲಿನಲ್ಲಿ ಶೇ.30ಭಾಗ ಪೋಷಕರು ಶುಲ್ಕ ಬಾಕಿ ಉಳಿಸಿಕೊಂಡಿದ್ದಾರೆ. ಈ ವಿಷಯವನ್ನು ಸಂಬಂಧಿಸಿದ ಅಧಿಕರಿಗಳು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಯಾವ ಶಾಲೆಗಳು ಅರ್‍ಟಿಇ ವಿಷಯಗಳನ್ನು ಗಾಳಿಗೆ ತೂರಿ ಅಗತ್ಯಕ್ಕಿಂತ ಹೆಚ್ಚು ಶುಲ್ಕ ಪಡೆದು ಗೊಂದಲಕ್ಕೆ ಕಾರಣವಾಗಿಯೋ ಅವರ ಮೇಲೆ ಕ್ರಮ ಜರುಗಿಸಿ ಶುಲ್ಕ ಗೊಂದಲಕ್ಕೆ ತೆರೆ ಎಳೆಯಬೇಕು. ಇತ್ತೀಚಿನ ದಿನಗಳಲ್ಲಿ ಸರಕಾರವು ಖಾಸಗಿ ಅನುದಾನರಹಿತ ಶಾಲೆಗಳ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಅನೇಕ ಸುತ್ತೋಲೆಗಳನ್ನು ಹೊರಡಿಸುವ ಮೂಲಕ 2002ರ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಲಾಗುತ್ತಿದೆ. ಈ ಕ್ರಮಗಳನ್ನು ಕೂಡಲೇ ಕೈಬಿಡಬೇಕೆಂದು ಅವರು ತಿಳಿಸಿದ್ದಾರೆ.

ನಮ್ಮ ಸಂವಿಧಾನದಲ್ಲಿ ದೇಶದ ಎಲ್ಲ ಮಕ್ಕಳಿಗೂ ಶಿಕ್ಷಣ ಪಡೆಯುವ ಹಕ್ಕನ್ನು ಹೇಗೆ ನೀಡಿದೆಯೋ ಹಾಗೆಯೇ ಆಹಾರದ ಭದ್ರತೆಯನ್ನು ನೀಡಿದೆ. ಅದು ಮಕ್ಕಳ ಅರೋಗ್ಯದ ದೃಷ್ಟಿಯಲ್ಲಿ ಅತಿ ಮುಖ್ಯ. ಹೀಗಾಗಿ ಸರಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳು ಎಂಬ ತಾರತಮ್ಯ ಮಾಡದೆ ಎಲ್ಲ ಮಕ್ಕಳಿಗೆ ಬಿಸಿ ಊಟ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಪೂರ್ವ ಪ್ರಾಥಮಿಕ ಶಾಲೆಗಳು ನಡೆಯದೆ ಆರ್ಥಿಕವಾಗಿ ತುಂಬಾ ತೊಂದರೆಯಲ್ಲಿವೆ. ಅಲ್ಲಿಯ ಶಿಕ್ಷಕರಿಗೆ ಹಾಗೂ ಅಡಳಿತ ಮಂಡಳಿಗಳಿಗೆ ಆರ್ಥಿಕ ನೆರವನ್ನು ಘೋಷಿಸಬೇಕು. ಸೆಕೆಂಡ್ ಪಿಯುಸಿ ಪರೀಕ್ಷೆ ಫಲಿತಾಂಶ ಗೊಂದಲವೂ ಸೇರಿಕೊಂಡಂತೆ ಪ್ರಥಮ ಪಿಯು ಫಲಿತಾಂಶ ಹಾಗೂ ಪಠ್ಯಕ್ರಮ ಬೋಧನೆ, ನಿರಂತರ ಮೌಲ್ಯಮಾಪನ ಈ ಎಲ್ಲ ವಿಷಯಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಪರಿಹಾರಗಳನ್ನು ನಿರಂತರವಾಗಿ ನೀಡಲು ಶಿಕ್ಷಣ ತಜ್ಞರ ಸಮಿತಿಯನ್ನು ಖಾಯಂ ಆಗಿ ನೇಮಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News