7 ಲಕ್ಷ ಮಂದಿಗೆ ಲಸಿಕೆ: ಮೇಳಕ್ಕೆ ಸೋಮವಾರ ಸಿಎಂ ಯಡಿಯೂರಪ್ಪ ಚಾಲನೆ

Update: 2021-06-20 18:10 GMT

ಬೆಂಗಳೂರು, ಜೂ.20: ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ದೃಷ್ಟಿಯಿಂದ ನಾಳೆ(ಜೂ.21) ಕೋವಿಡ್ 'ಲಸಿಕಾ ಮೇಳ'ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಲಿದ್ದು, ಏಳು ಲಕ್ಷ ಮಂದಿಗೆ ಲಸಿಕೆ ನೀಡುವ ಉದ್ದೇಶವನ್ನು ಹೊಂದಲಾಗಿದೆ.

ಲಸಿಕಾ ಮೇಳದಲ್ಲಿ 45 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮೊದಲ ಆದ್ಯತೆ ಮೇಲೆ ಲಸಿಕೆ ನೀಡಲಾಗುವುದು. ಅಲ್ಲದೆ, 18ರಿಂದ 44 ವರ್ಷದ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು. ಒಟ್ಟು 14 ಲಕ್ಷ ಕೋವಿಶೀಲ್ಡ್ ಡೋಸ್ ದಾಸ್ತಾನು ಇದ್ದು, ಸೋಮವಾರ(ಜೂ.21) ಒಂದೇ ದಿನ ಕನಿಷ್ಠ 5 ರಿಂದ 7 ಲಕ್ಷ ಡೋಸ್ ನೀಡುವ ಗುರಿ ಇರಿಸಲಾಗಿದೆ. ಈವರೆಗೂ ರಾಜ್ಯದಲ್ಲಿ 1.80 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ.

ಈಗಾಗಲೇ ಮೊದಲ ಡೋಸ್ ಪಡೆದು ಎರಡನೆ ಡೋಸ್ ನಿರೀಕ್ಷೆಯಲ್ಲಿರುವವರಿಗೆ ಮೇಳದಲ್ಲಿ ಲಸಿಕೆ ನೀಡಲಾಗುತ್ತಿದೆ. ಲಸಿಕಾ ಮೇಳದ ಯಶಸ್ವಿಗೊಳಿಸಲು ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿಯು ಲಸಿಕಾ ಕೇಂದ್ರಗಳಿಗೆ ಫಲಾನುಭವಿಗಳನ್ನು ಕರೆತರುವ ನಿಟ್ಟಿನಲ್ಲಿ ಅಗತ್ಯ ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News