ತನ್ನದೇ ಸ್ವಾಯತ್ತ ಸಂಸ್ಥೆ ಆಕ್ಷೇಪಿಸಿದ್ದರೂ ಶಾಲಾ ಮಂಡಳಿಗಾಗಿ ರಾಮದೇವ್ ಬಿಡ್‌ಗೆ ಸಮ್ಮತಿ ನೀಡಿದ್ದ ಕೇಂದ್ರ: ವರದಿ

Update: 2021-06-21 10:17 GMT

ಹೊಸದಿಲ್ಲಿ,ಜೂ.21: ವೈದಿಕ ಶಿಕ್ಷಣ ಕುರಿತು ರಾಷ್ಟ್ರೀಯ ಶಾಲಾ ಮಂಡಳಿಯೊಂದನ್ನು ಸ್ಥಾಪಿಸಲು ಯೋಗಗುರು ರಾಮದೇವ್ ಅವರ ಪತಂಜಲಿ ಯೋಗಪೀಠ ಟ್ರಸ್ಟ್ ಸಲ್ಲಿಸಿದ್ದ ಬಿಡ್‌ಗೆ ಹಸಿರು ನಿಶಾನೆ ತೋರಿಸಲು ಕೇಂದ್ರವು ತನ್ನದೇ ಸ್ವಾಯತ್ತ ಸಂಸ್ಥೆಯೊಂದರ ಆಕ್ಷೇಪಗಳನ್ನು ತಳ್ಳಿ ಹಾಕಿತ್ತು ಎಂದು indianexpress.com ವರದಿ ಮಾಡಿದೆ.

ಭಾರತೀಯ ಶಿಕ್ಷಾ ಮಂಡಳಿಯನ್ನು ಸ್ಥಾಪಿಸುವ ಪ್ರಕ್ರಿಯೆಯು ಎರಡೇ ತಿಂಗಳುಗಳಲ್ಲಿ ವೇಗವನ್ನು ಪಡೆದುಕೊಂಡಿತ್ತು ಮತ್ತು 2019ರ ಲೋಕಸಭಾ ಚುನಾವಣೆಗಾಗಿ ಮಾದರಿ ನೀತಿ ಸಂಹಿತೆಯು ಜಾರಿಗೆ ಬರುವ ಕೆಲವೇ ಸಮಯದ ಮೊದಲು ಪತಂಜಲಿಗೆ ಅಗತ್ಯ ಅನುಮತಿ ಲಭಿಸಿತ್ತು ಎಂದು ಶಿಕ್ಷಣ ಸಚಿವಾಲಯದ ಅಧಿಕೃತ ದಾಖಲೆಗಳನ್ನು ಉಲ್ಲೇಖಿಸಿ ಮಾಧ್ಯಮವು ವರದಿ ಮಾಡಿದೆ.

ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ, ವೈದಿಕ ಶಿಕ್ಷಣದ ಉತ್ತೇಜನ ಮತ್ತು ಸಂರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿರುವ ಉಜ್ಜಯಿನಿಯ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನವು ಆಕ್ಷೇಪಿಸಿದ್ದರೂ ಪತಂಜಲಿಗೆ ಅನುಮತಿಯನ್ನು ನೀಡಲಾಗಿತ್ತು.

ಭಾರತೀಯ ಸಾಂಪ್ರದಾಯಿಕ ಜ್ಞಾನವನ್ನು ಪ್ರಮಾಣೀಕರಿಸುವ ಮತ್ತು ಅದನ್ನು ಪಠ್ಯಕ್ರಮವನ್ನು ರೂಪಿಸುವ, ಶಾಲೆಗಳನ್ನು ಸಂಯೋಜಿಸುವ, ಪರೀಕ್ಷೆಗಳನ್ನು ನಡೆಸುವ ಮತ್ತು ಪ್ರಮಾಣಪತ್ರಗಳನ್ನು ವಿತರಿಸುವ ಮೂಲಕ ಆಧುನಿಕ ಶಿಕ್ಷಣದೊಂದಿಗೆ ಮೇಳೈಸುವ ದೇಶದ ಮೊದಲ ರಾಷ್ಟ್ರೀಯ ಶಾಲಾ ಮಂಡಳಿ ಎಂಬ ಪರಿಕಲ್ಪನೆಯನ್ನು ಭಾರತೀಯ ಶಿಕ್ಷಾ ಮಂಡಳಿಯ ಸ್ಥಾಪನೆಯ ಪ್ರಸ್ತಾವವು ಹೊಂದಿತ್ತು.

ಈ ಪರಿಕಲ್ಪನೆಯೊಂದಿಗೆ ತನ್ನದೇ ಆದ ಮಂಡಳಿಯನ್ನು ಸ್ಥಾಪಿಸಲು ಸಾಂದೀಪನಿ ಪ್ರತಿಷ್ಠಾನವು ಬಯಸಿತ್ತು. ಆದರೆ ಭಾರತೀಯ ಶಿಕ್ಷಾ ಮಂಡಳಿಯ ಸ್ಥಾಪನೆಗಾಗಿ ಖಾಸಗಿ ಪ್ರಾಯೋಜಕ ಸಂಸ್ಥೆಯೊಂದನ್ನು ನೇಮಕಗೊಳಿಸುವಂತೆ ಆಗಿನ ಶಿಕ್ಷಣ ಸಚಿವ ಪ್ರಕಾಶ್ ಜಾವಡೇಕರ್ ಅವರು ಸಾಂದೀಪನಿ ಪ್ರತಿಷ್ಠಾನಕ್ಕೆ ಸೂಚಿಸುವ ಮೂಲಕ ಪತಂಜಲಿಯ ರಂಗಪ್ರವೇಶಕ್ಕೆ ಮಾರ್ಗವನ್ನು ಸುಗಮಗೊಳಿಸಿದ್ದರು ಎಂದು ವರದಿಯಾಗಿದೆ.

ಬೆಳವಣಿಗೆಗಳ ಸರಣಿ

ಸಾಂದೀಪನಿ ಪ್ರತಿಷ್ಠಾನವು ಜ.11,2019ರಂದು ಜಾವಡೇಕರ್ ಅಧ್ಯಕ್ಷತೆಯಲ್ಲಿ ನಡೆದಿದ್ದ ತನ್ನ ಆಡಳಿತ ಮಂಡಳಿ ಸಭೆಯಲ್ಲಿ ತನ್ನದೇ ಆದ ವೈದಿಕ ಶಿಕ್ಷಣ ಮಂಡಳಿಯ ಸ್ಥಾಪನೆಯನ್ನು ಪ್ರಸ್ತಾವಿಸಿತ್ತು. ತನ್ನ 10ನೇ ತರಗತಿ(ವೇದಭೂಷಣ) ಮತ್ತು 12ನೇ ತರಗತಿ (ವೇದ ವಿಭೂಷಣ) ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪಡೆಯುವ ಪದವಿಗಳಿಗೆ ಮಾನ್ಯತೆ ಇಲ್ಲದಿರುವುದರಿಂದ ಮಂಡಳಿಯು ಅಗತ್ಯವಾಗಿದೆ ಎಂದು ಅದು ಹೇಳಿತ್ತು. ಆದರೆ ಮೂಲ ಅಜೆಂಡಾದಿಂದ ದೂರ ಸರಿದಿದ್ದ ಸಭೆಯು ವೈದಿಕ ಶಿಕ್ಷಣವನ್ನು ಆಧುನಿಕ ಶಿಕ್ಷಣದೊಂದಿಗೆ ಮೇಳೈಸಲು ಮುಕ್ತ ಬಿಡಿಂಗ್ ಮೂಲಕ ಭಾರತೀಯ ಶಿಕ್ಷಾ ಮಂಡಳಿಯನ್ನು ಸ್ಥಾಪಿಸಲು ನಿರ್ಧರಿಸಿತ್ತು. ಮಂಡಳಿಗಾಗಿ ಉಪನಿಯಮಗಳನ್ನು ರೂಪಿಸುವಂತೆ ಪ್ರತಿಷ್ಠಾನಕ್ಕೆ ಸೂಚಿಸಲಾಗಿತ್ತು.

ಸಭೆಯ ಅಜೆಂಡಾವನ್ನು ಕೊನೆಯ ಕ್ಷಣಗಳಲ್ಲಿ ಬದಲಿಸಿದ್ದನ್ನು ಆಕ್ಷೇಪಿಸಿ ಪ್ರತಿಷ್ಠಾನದ ಕಾರ್ಯದರ್ಶಿ ವಿರೂಪಾಕ್ಷ ವಿ.ಜಡ್ಡಿಪಾಲ ಅವರು ಫೆ.11ರಂದು ಶಿಕ್ಷಣ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ವೈದಿಕ ಶಿಕ್ಷಣ ಮಂಡಳಿಯನ್ನು ಭಾರತೀಯ ಶಿಕ್ಷಾ ಮಂಡಳಿಯನ್ನಾಗಿ ಬದಲಿಸಿದ್ದು ಅಜೆಂಡಾಕ್ಕೆ ಅನುಗುಣವಾಗಿರಲಿಲ್ಲ ಎಂದು ಅವರು ಹೇಳಿದ್ದರು. ಆದರೆ ತನ್ನ ನಿಲುವನ್ನು ಸಮರ್ಥಿಸುಕೊಂಡಿದ್ದ ಶಿಕ್ಷಣ ಸಚಿವಾಲಯವು ವೇದಗಳ ಪ್ರಸಾರಕ್ಕೆ ವಿಶಾಲ ಬುನಾದಿಯನ್ನು ಒದಗಿಸಲು ಮತ್ತು ಅದನ್ನು ಯುವಪೀಳಿಗೆಗಳಲ್ಲಿ ಜನಪ್ರಿಯಗೊಳಿಸಲು ಉದ್ದೇಶಿತ ಮಂಡಳಿಯ ಹೆಸರನ್ನು ಬದಲಿಸಲಾಗಿದೆ ಎಂದು ಉತ್ತರಿಸಿತ್ತು. ಸಚಿವಾಲಯದ ಸೂಚನೆಯಂತೆ ಪ್ರತಿಷ್ಠಾನವು ಭಾರತಿಯ ಶಿಕ್ಷಾ ಮಂಡಳಿಯ ಸ್ಥಾಪನೆಗಾಗಿ ಆಸಕ್ತರಿಂದ ಬಿಡ್‌ಗಳನ್ನು ಆಹ್ವಾನಿಸಿತ್ತು ಮತ್ತು ಬಿಡ್‌ಗಳನ್ನು ಸಲ್ಲಿಸಲು ಎರಡು ವಾರಗಳ ಸಾಮಾನ್ಯ ಗಡುವಿನ ಬದಲು ಕೇವಲ ಒಂದು ವಾರದ ಗಡುವನ್ನು ನೀಡಲಾಗಿತ್ತು.

ಫೆ.23ರಂದು ಪ್ರತಿಷ್ಠಾನದ ಐವರು ತಜ್ಞರ ಸಮಿತಿಯು ಮೂರು ಸಂಸ್ಥೆಗಳಿಂದ ಬಿಡ್‌ಗಳನ್ನು ಸ್ವೀಕರಿಸಿದ್ದು, ಎಲ್ಲವೂ ಮಂಡಳಿಯ ಸ್ಥಾಪನೆಗಾಗಿ ‘ಕಾರ್ಯಸಾಧ್ಯ ಯೋಜನೆ’ಗಳನ್ನು ಹೊಂದಿದ್ದವು. ಇದಕ್ಕಾಗಿ ಇತರ ಎರಡು ಸಂಸ್ಥೆಗಳು ಒಂದು ಮತ್ತು ಎರಡು ಕೋಟಿ ರೂ.ಗಳನ್ನು ವಿನಿಯೋಜಿಸುವುದಾಗಿ ತಿಳಿಸಿದ್ದರೆ, ಪತಂಜಲಿಯು 21 ಕೋ.ರೂ.ಗಳ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸುವ ಭರವಸೆಯನ್ನು ನೀಡಿತ್ತು. ಫೆ.27ರಂದು ಜಾವಡೇಕರ್ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯು ಪತಂಜಲಿಯ ಪ್ರಸ್ತಾವಕ್ಕೆ ಒಪ್ಪಿಗೆಯನ್ನು ಸೂಚಿಸಿತ್ತು. ವೈದಿಕ ಅಧ್ಯಯನಗಳಿಗಾಗಿಯೇ ತನ್ನದೇ ಆದ ರಾಷ್ಟ್ರೀಯ ವೇದ ಸಂಸ್ಕೃತ ಶಿಕ್ಷಾ ಮಂಡಳಿಯನ್ನು ಸ್ಥಾಪಿಸಲು ಸಾಂದೀಪನಿ ಪ್ರತಿಷ್ಠಾನಕ್ಕೆ ತಾತ್ವಿಕ ಅನುಮತಿಯನ್ನೂ ಅದು ನೀಡಿತ್ತು.

ಆಡಳಿತ ಮಂಡಳಿಯ ಸಭೆಯ ನಡಾವಳಿಗಳನ್ನು ಮಂಡಳಿಯ ಸ್ಥಾಪನೆಗೆ ಸರಕಾರದ ಅನುಮತಿ ಎಂದು ಪರಿಗಣಿಸಲಾಗುವುದಿಲ್ಲ ಎಂಬ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ್ ಪೀಠದ ಸಹಾಯಕ ಸಾಲಿಸಿಟರ್ ಜನರಲ್ ಸಲಹೆಯ ಮೇರೆಗೆ ಜಡ್ಡಿಪಾಲ, ಭಾರತೀಯ ಶಿಕ್ಷಾ ಮಂಡಳಿಯನ್ನು ಸ್ಥಾಪಿಸಲು ಆಯ್ಕೆಯಾಗಿರುವ ಬಗ್ಗೆ ಪತಂಜಲಿಗೆ ವಿಧ್ಯುಕ್ತ ಪತ್ರವನ್ನು ಕಳುಹಿಸಲು ಲಿಖಿತ ಆದೇಶವನ್ನು ಕೋರಿ ಮಾ.5ರಂದು ಶಿಕ್ಷಣ ಸಚಿವಾಲಯಕ್ಕೆ ಪತ್ರವನ್ನು ಬರೆದಿದ್ದರು. ಬಳಿಕ ಸಚಿವಾಲಯವು ಪತಂಜಲಿಗೆ ಪತ್ರವನ್ನು ನೀಡಲು ಜಡ್ಡಿಪಾಲ ಅವರಿಗೆ ಮೌಖಿಕ ಅನುಮತಿಯನ್ನು ನೀಡಿತ್ತು. ಆದರೆ ತನಗೆ ನೀಡಲಾಗಿರುವ ಮೌಖಿಕ ಅನುಮತಿಯನ್ನು ಸರಕಾರದ ಆದೇಶ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿ ಅವರು ಸಚಿವಾಲಯಕ್ಕೆ ಪ್ರತ್ಯೇಕ ಪತ್ರವನ್ನು ಬರೆದಿದ್ದರು. ಅಲ್ಲದೆ ಸಚಿವಾಲಯದ ನಿಯಮದಂತೆ ಮಂಡಳಿಯನ್ನು ಸ್ಥಾಪಿಸಲು ಪ್ರತಿಷ್ಠಾನಕ್ಕೆ ಅಧಿಕಾರವಿದೆಯೇ ಹೊರತು ಅದನ್ನು ಖಾಸಗಿ ಸಂಸ್ಥೆಗೆ ಹೊರಗುತ್ತಿಗೆ ನೀಡಲು ಅಲ್ಲ ಎಂದೂ ಜಡ್ಡಿಪಾಲ ಸ್ಪಷ್ಟಪಡಿಸಿದ್ದರು.

ಮೇ 9ರಂದು ಅಪರಾಹ್ನ 4:39ಕ್ಕೆ ಸಚಿವಾಲಯವು ಅಂತಿಮ ಒಪ್ಪಿಗೆ ಪತ್ರದ ಪ್ರತಿಯನ್ನು ಜಡ್ಡಿಪಾಲ ಅವರಿಗೆ ಇ-ಮೇಲ್ ಮೂಲಕ ರವಾನಿಸಿದ್ದು, ಅದನ್ನು ತಕ್ಷಣ ಪತಂಜಲಿ ಟ್ರಸ್ಟ್‌ಗೆ ಹಸ್ತಾಂತರಿಸುವಂತೆ ಸೂಚಿಸಿತ್ತು. ಅದೇ ದಿನ ಸಂಜೆ 5:30ಕ್ಕೆ ಮಾದರಿ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ಪತ್ರದ ದಿನಾಂಕ ಮತ್ತು ಸಮಯ ಎರಡೂ ಇಲ್ಲಿ ಮುಖ್ಯವಾಗಿವೆ.

ಆದರೆ ಜಡ್ಡಿಪಾಲ ಸಚಿವಾಲಯದ ಸೂಚನೆಗೆ ಸ್ಪಂದಿಸಿರಲಿಲ್ಲ ಮತ್ತು ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿ 7:30ರ ಸುಮಾರಿಗೆ ಜಾವಡೇಕರ್ ಪತಂಜಲಿಗೆ ಪತ್ರವನ್ನು ವಿತರಿಸಲು ಪ್ರತಿಷ್ಠಾನದ ಉಪಾಧ್ಯಕ್ಷ ಆರ್.ಎ.ಮುಳೆ ಅವರಿಗೆ ಅಧಿಕಾರವನ್ನು ನೀಡಿದ್ದರು. ಅಂತಿಮವಾಗಿ ರಾತ್ರಿ 8:36ಕ್ಕೆ ಅದನ್ನು ಪತಂಜಲಿಗೆ ರವಾನಿಸಲಾಗಿತ್ತು indianexpress.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News