ಇರಾನ್ ಅಣುಸ್ಥಾವರ ತಾತ್ಕಾಲಿಕ ಸ್ಥಗಿತ

Update: 2021-06-21 17:27 GMT

ಟೆಹ್ರಾನ್, ಜೂ.21: ಇರಾನ್‌ನ ಏಕೈಕ ಪರಮಾಣು ಸ್ಥಾವರವನ್ನು ತಾತ್ಕಾಲಿಕವಾಗಿ ತುರ್ತು ಸ್ಥಗಿತಗೊಳಿಸಲಾಗಿದೆ ಎಂದು ಸರಕಾರಿ ಟಿವಿ ವಾಹಿನಿ ವರದಿ ಮಾಡಿದೆ. ಬುಶೆಹರ್‌ನಲ್ಲಿರುವ ಪರಮಾಣು ಸ್ಥಾವರದಲ್ಲಿ ಶನಿವಾರ ಆರಂಭವಾಗಿರುವ ಸ್ಥಗಿತ ಪ್ರಕ್ರಿಯೆ ಮೂರು-ನಾಲ್ಕು ದಿನ ಮುಂದುವರಿಯಬಹುದು. ವಿದ್ಯುತ್ ನಿಲುಗಡೆಯಾಗುವ ಸಾಧ್ಯತೆಯೂ ಇದೆ ಎಂದು ವಿದ್ಯುತ್ ಉತ್ಪಾದನಾ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ. ಪರಮಾಣು ಸ್ಥಾವರದ ಕಾರ್ಯ ತುರ್ತು ಸ್ಥಗಿತದ ಬಗ್ಗೆ ಇದೇ ಪ್ರಥಮ ಬಾರಿ ಇರಾನ್ ವರದಿ ಮಾಡಿದೆ. ರಶ್ಯಾದ ನೆರವಿನಿಂದ ನಿರ್ಮಾಣಗೊಂಡಿರುವ ಪರಮಾಣು ಸ್ಥಾವರದಲ್ಲಿ ಬಳಕೆಯಾದ ಕಬ್ಬಿಣದ ಸರಳುಗಳನ್ನು ರಶ್ಯಾಕ್ಕೆ ಮರಳಿಸಬೇಕೆಂಬ ಷರತ್ತಿದೆ.

ಈ ಮಧ್ಯೆ, 2018ರಲ್ಲಿ ಅಮೆರಿಕ ವಿಧಿಸಿದ ನಿರ್ಬಂಧದಿಂದಾಗಿ ರಶ್ಯಾದಿಂದ ಪರಮಾಣು ಸಾಧನಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಸ್ಥಾವರದ ಕಾರ್ಯ ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಇರಾನ್‌ನ ಪರಮಾಣು ಇಲಾಖೆಯ ಅಧಿಕಾರಿ ಮುಹಮ್ಮದ್ ಜಫಾರಿ ಮಾರ್ಚ್‌ನಲ್ಲಿ ಹೇಳಿದ್ದರು. ರಶ್ಯಾದಲ್ಲಿ ಉತ್ಪಾದಿಸಿದ ಯುರೇನಿಯಂನಿಂದ ಕಾರ್ಯಾಚರಿಸುವ ಇರಾನ್ ಅಣುಸ್ಥಾವರದ ಕಾರ್ಯ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಪರಮಾಣು ದಳದ ನಿಗಾದಡಿ ನಡೆಯುತ್ತದೆ. 1970ರಲ್ಲಿ ಶಾ ಆಡಳಿತದ ಸಂದರ್ಭ ಅಣುಸ್ಥಾವರ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿತ್ತು. ಇಸ್ಲಾಮಿಕ್ ಕ್ರಾಂತಿಯ ಬಳಿಕ, ಇರಾನ್-ಇರಾಕ್ ಯುದ್ಧದ ಸಂದರ್ಭ ಸ್ಥಾವರ ಪದೇ ಪದೇ ದಾಳಿಗೆ ಗುರಿಯಾಗಿತ್ತು. ಬಳಿಕ ರಶ್ಯಾ ಈ ಸ್ಥಾವರದ ನಿರ್ಮಾಣಕಾರ್ಯ ಪೂರ್ಣಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News