ಆದೇಶ ಪಾಲಿಸದ ಮಂಗಳೂರು ಮಹಾನಗರ ಪಾಲಿಕೆ: ಸೂಕ್ತ ಕ್ರಮಕ್ಕೆ ಹೈಕೋರ್ಟ್ ಆದೇಶ

Update: 2021-06-21 18:38 GMT

ಬೆಂಗಳೂರು, ಜೂ.21: ಘನತ್ಯಾಜ್ಯ ನಿರ್ವಹಣೆ ಸಂಬಂಧ ನ್ಯಾಯಾಲಯದ ಆದೇಶಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಮಂಗಳೂರಿನಲ್ಲಿ ಘನತ್ಯಾಜ್ಯ ಘಟಕ ಕುಸಿತ ದುರ್ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು.

ಈ ವೇಳೆ ಪಾಲಿಕೆಯ ವೈಫಲ್ಯದ ಕುರಿತು ಪ್ರಸ್ತಾಪಿಸಿದ ಪೀಠ, ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ತಜ್ಞರ ಸಂಸ್ಥೆ ಎನ್‍ಐಟಿಕೆ ಸೂರತ್ಕಲ್ ಸಲ್ಲಿಸಿರುವ 3 ವರದಿಗಳಲ್ಲೂ ಪಾಲಿಕೆಯ ವೈಫಲ್ಯ ಎತ್ತಿ ಹಿಡಿಯಲಾಗಿದೆ. ಆದರೆ, ಅವುಗಳನ್ನು ತಿದ್ದಿಕೊಳ್ಳಲು ಪಾಲಿಕೆ ಗಂಭೀರ ಕ್ರಮಗಳನ್ನೇ ಕೈಗೊಂಡಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿತು.

ಹಾಗೆಯೇ, ಪಾಲಿಕೆ ನ್ಯಾಯಾಲಯದ ಆದೇಶಗಳಿಗೂ ಬೆಲೆ ನೀಡಿಲ್ಲ. ಪೀಠದ ನಿರ್ದೇಶನಗಳನ್ನು ಪಾಲಿಸುವಲ್ಲಿ ಹಾಗೂ ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಅನುಸರಿಸುವಲ್ಲಿ ನಿರ್ಲಕ್ಷ್ಯವಹಿಸುತ್ತಿರುವ ಪಾಲಿಕೆಯ ನಡವಳಿಕೆಯನ್ನು ಸರಕಾರ ಮೂಕ ಪ್ರೇಕ್ಷಕನಂತೆ ನೋಡುತ್ತಾ ಕುಳಿತು ಕೊಳ್ಳಬಾರದು. ತನ್ನ ಅಧಿಕಾರ ಬಳಸಿ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಮಕೈಗೊಂಡು ಜುಲೈ 8ರೊಳಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿತು.

ಅಲ್ಲದೇ, ಜಿಲ್ಲಾಧಿಕಾರಿ ಮಂಗಳೂರಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಸಮಸ್ಯೆ ಸಂಬಂಧ ಸಭೆ ನಡೆಸಿದ್ದಾರೆ. ಆದರೆ, ಆ ಸಭೆಗೆ ಮುಖ್ಯವಾಗಿ ಕೇಂದ್ರ ಅಥವಾ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳನ್ನೇ ಕರೆದಿಲ್ಲ. ಹಾಗಿದ್ದರೆ, ಏಕೆ ಸಭೆ ನಡೆಸಬೇಕಿತ್ತು. ಘನತ್ಯಾಜ್ಯ ಭೂಭರ್ತಿ ಘಟಕಗಳು ಕುಸಿದು ಅನಾಹುತ ಉಂಟಾಗಿ 2 ವರ್ಷ ಕಳೆದರೂ ಪರಿಸ್ಥಿತಿ ಸುಧಾರಿಸಿಲ್ಲ. ಎಪ್ರಿಲ್‍ನಲ್ಲಿ ಅಗ್ನಿ ಅನಾಹುತ ಸಂಭವಿಸಿದರೂ ಮತ್ತೆ ಅಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಂಡಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಈ ವೇಳೆ, ಸರಕಾರದ ಪರ ಎಎಜಿ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿ, ಮೂರು ವರದಿಗಳನ್ನು ಆಧರಿಸಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದರೂ ಪೀಠ ಒಪ್ಪಲಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News