ಪ್ರವಾಹ, ಭೂಕುಸಿತ: ಮುನ್ನೆಚ್ಚರಿಕೆ ಅಗತ್ಯ

Update: 2021-06-22 07:55 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೋವಿಡ್ ಎರಡನೇ ಅಲೆಯಿಂದಾಗಿ ಐವತ್ತಾರು ದಿನಗಳ ಲಾಕ್‌ಡೌನ್ ಸಡಿಲುಗೊಳಿಸಿದ ಪರಿಣಾಮವಾಗಿ ಜನಸಾಮಾನ್ಯರ ಸಹಜ ಜೀವನ ಕೊಂಚ ಮಟ್ಟಿಗೆ ಹಳಿಗೆ ಬಂದಂತಾಗಿದೆ. ಆದರೆ ಇನ್ನೊಂದೆಡೆ ಮುಂಗಾರು ಮಳೆಯ ಪರಿಣಾಮವಾಗಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹಾಗೂ ಮಲೆನಾಡಿನಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ವರ್ಷಧಾರೆಯ ಆರಂಭದ ಅಬ್ಬರ ಈಗಿಲ್ಲವಾದರೂ ಅದು ಯಾವಾಗ ತೀವ್ರತೆ ಪಡೆಯುತ್ತದೆ ಎಂದು ಈಗಲೇ ಹೇಳಲಾಗುವುದಿಲ್ಲ. ಕಳೆದ ನಾಲ್ಕು ದಿನಗಳಿಂದ ಕೃಷ್ಣಾ ಮತ್ತು ಘಟಪ್ರಭಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ. ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಅಲ್ಲಿನ ಮಳೆಯ ನೀರಿನಿಂದ ಬೆಳಗಾವಿ, ವಿಜಯಪುರ, ಕಲಬುರಗಿ, ರಾಯಚೂರು ಮುಂತಾದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹರಿಯುವ ನದಿಗಳು ಉಕ್ಕೇರುತ್ತಿವೆ. ಇದರ ಪರಿಣಾಮವಾಗಿ ಅನೇಕ ಕಡೆ ಸೇತುವೆಗಳು ಮುಳುಗಡೆಯಾದ ವರದಿಗಳು ಬಂದಿವೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭಾ, ಹಿರಣ್ಯಕೇಶಿ, ದೂದ್‌ಗಂಗಾ, ವೇದ ಗಂಗಾ ನದಿಗಳು ಉಕ್ಕೇರಿ ಹರಿಯುತ್ತಿವೆ. ಹೀಗಾಗಿ ನದಿ ತೀರದ ಹೊಲ ಗದ್ದೆಗಳಿಗೆ ನೀರು ನುಗ್ಗಿ ಸಾಕಷ್ಟು ನಷ್ಟ ಉಂಟಾಗಿದೆ.ಬಳ್ಳಾರಿ ಜಿಲ್ಲೆಯ ನಾಲೆಗಳಲ್ಲಿ ನೀರು ನುಗ್ಗಿ ಸಾವಿರಾರು ಎಕರೆ ಕಬ್ಬಿನ ಗದ್ದೆಗಳು ಜಲಾವೃತವಾಗಿವೆ. ಹೀಗೆ ಬರೀ ನದಿ ನೀರು ಮಾತ್ರ ಕಾರಣವಲ್ಲ. ನಾಲೆಗಳಲ್ಲಿ ಹೂಳು ತುಂಬಿರುವುದರಿಂದ ಹೀಗಾಗಿದೆ ಎಂದು ಹೇಳಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮುಧೋಳ ತಾಲೂಕುಗಳಲ್ಲೂ ನೆರೆ ಹಾವಳಿಯಿಂದಾಗಿ ನದಿ ತೀರದ ಹಳ್ಳಿಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹದ ಭೀತಿ ಎದುರಾಗಿದ್ದರೆ ಇನ್ನೊಂದೆಡೆ ಮಲೆನಾಡಿನ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸುತ್ತಿರುವ ವರದಿಗಳು ಬಂದಿವೆ. ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಂಭೀರ ಸ್ವರೂಪದ ಭೂಕುಸಿತಗಳು ಸಂಭವಿಸುತ್ತಲೇ ಇವೆ. ಪ್ರಸಕ್ತ ಮಳೆಗಾಲದಲ್ಲೂ ಗುಡ್ಡ ಕುಸಿದಂತಹ ಘಟನೆಗಳು ವರದಿಯಾಗಿವೆ. ಕಳೆದ ವರ್ಷವೂ ಭೂಕುಸಿತದಿಂದ ಸಾಕಷ್ಟು ಅನಾಹುತವಾಗಿತ್ತು. ಸಹ್ಯಾದ್ರಿ ಶ್ರೇಣಿಯಲ್ಲಿನ ಭೂಕುಸಿತದ ಕುರಿತು ಅಧ್ಯಯನ ಮಾಡಲು ಕರ್ನಾಟಕ ಸರಕಾರ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಿತ್ತು. ಅದು ಆರು ತಿಂಗಳ ಅಧ್ಯಯನ ನಡೆಸಿ ಸರಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಈ ತಜ್ಞರ ವರದಿ ಕಡತಗಳ ರಾಶಿಯಲ್ಲಿ ಮುಳುಗಿದೆ. ಈ ವರದಿಯ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಸರಕಾರದಲ್ಲಿದ್ದವರಿಗೆ ಪುರುಸೊತ್ತಿಲ್ಲ.

 ಇತ್ತೀಚಿನ ವರೆಗೆ ಜಿಲ್ಲಾಡಳಿತಗಳು ಕೊರೋನ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಇದರ ಜೊತೆಗೆ ರಾಜ್ಯದ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿಯಲ್ಲಿ ಭಿನ್ನಮತ ಹಾಗೂ ಒಳ ಕಚ್ಚಾಟಗಳಿಂದಾಗಿ ಮಳೆಗಾಲದ ಪರಿಸ್ಥಿತಿಯನ್ನು ಸಿದ್ಧತೆ ಮಾಡಲು ಗಮನವನ್ನು ಹರಿಸಲಾಗಲಿಲ್ಲ. ಈಗಲಾದರೂ ಸರಕಾರ ಎಚ್ಚೆತ್ತು ಕಾರ್ಯೋನ್ಮುಖವಾಗಬೇಕಾಗಿದೆ. ಇತ್ತೀಚೆಗೆ ಪ್ರವಾಹದ ಅನಾಹುತಗಳ ಬಗ್ಗೆ ಮಾಹಿತಿ ಪಡೆಯಲು ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವ ಕುರಿತು ಚರ್ಚಿಸಲಾಗಿದೆ. 2019ರಲ್ಲಿ ಮಹಾರಾಷ್ಟ್ರದ ಅಣೆಕಟ್ಟುಗಳಿಂದ ಯಾವುದೇ ಮುನ್ಸೂಚನೆ ನೀಡದೆ ನೀರು ಬಿಟ್ಟ ಪರಿಣಾಮವಾಗಿ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಹದಿಂದ ಸಾಕಷ್ಟು ನಷ್ಟ ಉಂಟಾಗಿತ್ತು. ಕಳೆದ ವರ್ಷ ಜಿಲ್ಲೆಗಳ ಜಿಲ್ಲಾಡಳಿತಗಳು ಮಹಾರಾಷ್ಟ್ರದ ಅಣೆಕಟ್ಟುಗಳ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡು ಹೆಚ್ಚು ನಷ್ಟ ಉಂಟಾಗದಂತೆ ಎಚ್ಚರ ವಹಿಸಿದ್ದರು. ಆದರೆ ಈ ಸಲ ಮಹಾರಾಷ್ಟ್ರದ ಅಣೆಕಟ್ಟುಗಳಿಂದ ನೀರು ಬಿಡುವುದಕ್ಕೆ ಮೊದಲೇ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರವಾಹದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರಕಾರವೊಂದರಿಂದಲೇ ಸಾಧ್ಯವಿಲ್ಲ. ನೆರವು ನೀಡಲು ಕೇಂದ್ರ ಸರಕಾರ ಕೂಡ ಮುಂದಾಗಬೇಕು. ಕರ್ನಾಟಕದ ಸಂಸದರು ಕೇಂದ್ರದ ಮೇಲೆ ಒತ್ತಡ ತರಬೇಕು. ರಾಜ್ಯ ಸರಕಾರ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು.

ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಕಾರ್ಯೋನ್ಮುಖವಾಗುವ ಜೊತೆಗೆ ಮಲೆನಾಡಿನಲ್ಲಿ ಮಳೆಗಾಲದಲ್ಲಿ ಪ್ರತಿ ವರ್ಷ ಸಂಭವಿಸುವ ಭೂಕುಸಿತದ ಸಮಸ್ಯೆಯ ನಿವಾರಣೆಗೂ ಸರಕಾರ ಆದ್ಯತೆ ನೀಡಬೇಕು. ಅಲ್ಲಿ ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಸಂಭವಿಸುವ ಭೂಕುಸಿತಕ್ಕೆ ಮುಖ್ಯವಾದ ಕಾರಣ ಅರಣ್ಯನಾಶ. ನಿತ್ಯ ಹರಿದ್ವರ್ಣದ ಪಶ್ಚಿಮ ಘಟ್ಟದಲ್ಲಿ ಟಿಂಬರ್ ಮಾಫಿಯಾವು ಗಿಡ ಮರಗಳನ್ನು ಕಡಿದು ಕಳ್ಳ ಸಾಗಣೆ ಮಾಡುವುದರಿಂದ ಭೂಕುಸಿತ ಉಂಟಾಗುತ್ತದೆ ಎಂಬುದು ಪರಿಸರ ತಜ್ಞರ ಅಭಿಪ್ರಾಯವಾಗಿದೆ. ಅಷ್ಟೇ ಅಲ್ಲ, ರಸ್ತೆ, ಸೇತುವೆ ಕಟ್ಟುವುದಕ್ಕಾಗಿ ಇಳಿಜಾರುಗಳನ್ನು ಕಡಿಯುವುದು ಹಾಗೂ ಇಳಿಜಾರು ಪ್ರದೇಶಗಳಲ್ಲಿ ಕಾಮಗಾರಿಗಳಿಗೆ ಅವಕಾಶ ನೀಡುವುದು ಕೂಡ ಭೂಕುಸಿತಕ್ಕೆ ಕಾರಣ ಎಂದು ಸರಕಾರ ರಚಿಸಿದ ತಜ್ಞರ ಸಮಿತಿ ವರದಿ ತಿಳಿಸಿದೆ. ಆದ್ದರಿಂದ ಸರಕಾರ ತಜ್ಞರ ಸಮಿತಿಯ ವರದಿಯನ್ನು ಪರಿಶೀಲಿಸಿ ಭೂಕುಸಿತವನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

 ಈ ಸಲ ಭೂಕುಸಿತದ ಸಂಭಾವ್ಯ ಪ್ರದೇಶಗಳನ್ನು ಗುರುತಿಸಲಾಗಿದೆ. ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ, ಮಂಗಳೂರು ಮಾತ್ರವಲ್ಲದೆ ತೀರ್ಥಹಳ್ಳಿ, ಕುಂದಾಪುರ, ಹೊಸನಗರ, ಖಾನಾಪುರ, ಕೊಪ್ಪ, ಮಡಿಕೇರಿ, ವೀರಾಜಪೇಟೆ, ಸಕಲೇಶಪುರ, ಶೃಂಗೇರಿ, ಚಿಕ್ಕಮಗಳೂರು ಮುಂತಾದ ಕಡೆ ಭೂಕುಸಿತ ಸಂಭವಿಸುವ ಮುನ್ನೆಚ್ಚರಿಕೆ ನೀಡಲಾಗಿದೆ.ಬರೀ ಎಚ್ಚರಿಕೆ ನೀಡಿದರೆ ಸಾಲದು. ಅರಣ್ಯ ನಾಶವನ್ನು ತಡೆಯಬೇಕೆಂದರೆ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಮಾರಕ ಯೋಜನೆಗಳನ್ನು ಸರಕಾರ ಕೈಬಿಡಬೇಕು. ಕಾರ್ಪೊರೇಟ್ ಲಾಬಿಯ ಪ್ರಭಾವಕ್ಕೆ ತಲೆ ಬಾಗುವ, ಒತ್ತಡಕ್ಕೆ ಮಣಿಯುವ ಸರಕಾರದಿಂದ ಇದು ಸಾಧ್ಯವೇ ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಸ್ಪಷ್ಟ ಉತ್ತರ ಸಿಗುವುದಿಲ್ಲ.

ಜನಸಾಮಾನ್ಯರ ಸುರಕ್ಷತೆಗಾದರೂ ಈ ವ್ಯವಸ್ಥೆಯ ಚೌಕಟ್ಟಿನಲ್ಲಿ ಕೆಲ ತುರ್ತು ಕ್ರಮಗಳನ್ನು ಕೈಗೊಳ್ಳಲೇಬೇಕು. ಭೂಕುಸಿತದ ಅಪಾಯಕಾರಿ ಪ್ರದೇಶಗಳಲ್ಲಿ ತಕ್ಷಣ ಜನ ವಸತಿಯನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕು. ಇದಕ್ಕಾಗಿ ಈ ಭೂಪ್ರದೇಶಗಳಲ್ಲಿ ಸಮೀಕ್ಷೆ ನಡೆಸಬೇಕಾಗಿದೆ.

ಪ್ರವಾಹ ಮತ್ತು ಭೂಕುಸಿತದಂತಹ ನೈಸರ್ಗಿಕ ಅನಾಹುತಗಳನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಟ್ಟಾಗಿ ಕಾರ್ಯ ಯೋಜನೆಯೊಂದನ್ನು ರೂಪಿಸುವುದು ತುರ್ತು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News