ಶಾಲೆ-ಕಾಲೇಜು ಹಂತ ಹಂತವಾಗಿ ತೆರೆಯುವ ಬಗ್ಗೆ ತಜ್ಞರ ಸಮಿತಿ ಸಲಹೆ ನೀಡಿದೆ: ಸಿಎಂ ಬಿಎಸ್‌ವೈ

Update: 2021-06-22 12:54 GMT

ಬೆಂಗಳೂರು, ಜೂ.22: ರಾಜ್ಯದಲ್ಲಿ ಕೋವಿಡ್ 3ನೇ ಅಲೆಯನ್ನು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ರಾಜ್ಯ ಸರಕಾರ ನೇಮಿಸಿದ್ದ ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿಯು ರಾಜ್ಯ ಸರಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದ ತಜ್ಞರ ಸಮಿತಿಯು, ಮೂರನೇ ಅಲೆ ಸಂದರ್ಭದಲ್ಲಿ ಮಕ್ಕಳಿಗೆ ಹೆಚ್ಚಾಗಿ ಸೋಂಕು ತಗಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಶಿಫಾರಸುಗಳನ್ನು ಮಾಡಿದೆ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಮಕ್ಕಳ ಎಚ್.ಡಿ.ಯು ಘಟಕ, ಮಕ್ಕಳ ತೀವ್ರ ನಿಗಾ ಘಟಕ ಸ್ಥಾಪನೆ, ಮಕ್ಕಳ ಆಸ್ಪತ್ರೆ ಸ್ಥಾಪನೆ ಮಾಡಬೇಕು. ಅಲ್ಲದೆ, ಅಪೌಷ್ಠಿಕತೆ ನಿವಾರಣೆಗೆ ಆದ್ಯತೆ ನೀಡುವಂತೆ ಸಮಿತಿಯು ಸಲಹೆ ನೀಡಿದೆ.

3ನೇ ಅಲೆ ತಡೆಗಟ್ಟಲು ಮಾನವ ಸಂಪನ್ಮೂಲ, ಆರ್ಥಿಕ ಸಂಪನ್ಮೂಲ ಹಾಗೂ ಪರಿಣಿತರ ನೆರವು ಪಡೆಯಬೇಕು. ವಿವಿಧ ವೈದ್ಯಕೀಯ ಸಂಘಟನೆಗಳ ಸಹಯೋಗದೊಂದಿಗೆ ವೈದ್ಯರು, ದಾದಿಯರ ಕೊರತೆ ನಿವಾರಣೆ, ರಾಜ್ಯದಲ್ಲಿರುವ ಎಲ್ಲ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯುವುದು, ಕಾರ್ಪೋರೇಟ್ ಸಂಸ್ಥೆಗಳ ಸಹಕಾರದಿಂದ ಸಂಪನ್ಮೂಲಗಳ ನೆರವು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕರ ಸಹಭಾಗಿತ್ವ ಪಡೆಯುವ ಬಗ್ಗೆ ಸಮಿತಿಯು ಸಲಹೆ ನೀಡಿದೆ.

ಕೋವಿಡ್‍ಗೆ ತುತ್ತಾದ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸಲು ಪ್ರತಿ ಆಸ್ಪತ್ರೆಯಲ್ಲಿ ಮನೋವೈದ್ಯರ ಸೇವೆ ಒದಗಿಸುವುದು ಸೂಕ್ತ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಆಮ್ಲಜನಕ ಕೊರತೆ ನಿವಾರಣೆ ಕುರಿತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲಹೆ ನೀಡಿರುವ ಸಮಿತಿ, ಕೋವಿಡ್ ನಂತರ ತಲೆದೋರುವ ಆರೋಗ್ಯ ಸಮಸ್ಯೆಗಳ ಕುರಿತು ಎಚ್ಚರ ವಹಿಸುವ ಕುರಿತು ಹಾಗೂ ಕೋವಿಡ್ ಅಲ್ಲದೆ ಇತರ ಆರೋಗ್ಯ ಸಮಸ್ಯೆಗಳಿಗೂ ಆದ್ಯತೆ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.

ಮಕ್ಕಳಿಗೆ ಪರೀಕ್ಷೆ ನಡೆಸುವ ಬಗ್ಗೆ, ಕೋವಿಡ್ ಕೇರ್ ಸೆಂಟರುಗಳಲ್ಲಿರುವ ವ್ಯವಸ್ಥೆಗಳ ಕುರಿತು ಸಮಿತಿಯು ಮಾಹಿತಿ ನೀಡಿದೆ. ಜೊತೆಗೆ, ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಅತ್ಯಂತ ಸೂಕ್ತ ಪರಿಹಾರವಾಗಿದ್ದು, ಲಸಿಕೆ ಅಭಿಯಾನ ಇನ್ನಷ್ಟು ತೀವ್ರಗೊಳಿಸುವಂತೆ ಸರಕಾರಕ್ಕೆ ಸಲಹೆ ನೀಡಿದೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದಕ್ಕೆ ಲಸಿಕೆ ನೀಡಲು ಆದ್ಯತೆ ನೀಡಬೇಕು. ಶಾಲಾ, ಕಾಲೇಜುಗಳನ್ನು ಹಂತ ಹಂತವಾಗಿ ತೆರೆಯುವ ಬಗ್ಗೆ ಚಿಂತನೆ ನಡೆಸಲು ಸಮಿತಿ ಸಲಹೆ ಮಾಡಿದೆ. 18 ವಯಸ್ಸಿನ ಮೇಲಿನ ಮಕ್ಕಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಿ ಕಾಲೇಜುಗಳನ್ನು ಪ್ರಾರಂಭಿಸುವ ಚಿಂತನೆ ನಡೆಸುವಂತೆ ಸಮಿತಿ ತಿಳಿಸಿದೆ.

ತಜ್ಞರ ಸಮಿತಿಯ ಜೊತೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಕೋವಿಡ್ ಮೂರನೆ ಅಲೆ ಎದುರಿಸಲು ಕೈಗೊಳ್ಳಬೇಕಾದ ಸಿದ್ಧತೆ ಕುರಿತು ಸವಿಸ್ತಾರವಾಗಿ ತಜ್ಞರ ಸಮಿತಿಯ ಜೊತೆ ಚರ್ಚೆ ಮಾಡಲಾಗಿದೆ. ಮೂರನೆ ಅಲೆ ಸಂದರ್ಭದಲ್ಲಿ ಮಕ್ಕಳಿಗೆ ಹೆಚ್ಚಾಗಿ ಸೋಂಕು ತಗಲುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ಕೆಲವು ಶಿಫಾರಸ್ಸುಗಳನ್ನು ಮಾಡಿದೆ ಎಂದರು.

ಬೀದಿ ಬದಿ ವ್ಯಾಪಾರಿಗಳು, ಹೊಟೇಲ್‍ಗಳು ಸೇರಿದಂತೆ ಎಲ್ಲ ಅಂಗಡಿಗಳನ್ನು ತೆರೆಯಲು ನಾವು ಅವಕಾಶ ಮಾಡಿಕೊಟ್ಟಿರುವುದು ಸರಿಯಿದೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಸಮಿತಿ ಹೇಳಿದೆ. ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜುಗಳನ್ನು ಆರಂಭ ಮಾಡಲು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಲಸಿಕೆ ಹಾಕಿಸಿದ ಬಳಿಕ ಹಂತ ಹಂತವಾಗಿ ಆರಂಭ ಮಾಡಬಹುದು ಎಂದು ಸಮಿತಿ ತಿಳಿಸಿದೆ ಎಂದು ಅವರು ಹೇಳಿದರು.

ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು ಸೇರಿದಂತೆ ಇನ್ನಿತರ ಕಾಲೇಜುಗಳನ್ನು ತೆರೆಯಲು ಅವಕಾಶ ಕಲ್ಪಿಸುವಂತೆ ತಜ್ಞರ ಸಮಿತಿ ಹೇಳಿದೆ. ಆದರೆ, 1 ರಿಂದ 10ನೆ ತರಗತಿಯವರೆಗೆ ಶಾಲೆ ತೆರೆಯುವ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಮಕ್ಕಳಿಗೆ ಲಸಿಕೆ ಕೊಡುವ ಬಗ್ಗೆ ಇನ್ನೂ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಎಲ್ಲವನ್ನೂ ನೋಡಿಕೊಂಡು ಮಕ್ಕಳಿಗೂ ಲಸಿಕೆ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ತಜ್ಞರ ಸಮಿತಿ ಜೊತೆ ನಡೆದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News