ಕುಮಾರಸ್ವಾಮಿ ಬಗ್ಗೆ ಹೇಳಿಕೆ: ಝಮೀರ್ ಅಹ್ಮದ್ ಕ್ಷಮೆಯಾಚಿಸಲು ಜೆಡಿಎಸ್ ಆಗ್ರಹ

Update: 2021-06-22 13:49 GMT

ಬೆಂಗಳೂರು, ಜೂ.22: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಶಾಸಕ ಝಮೀರ್ ಅಹ್ಮದ್ ಅವರು ಲಘುವಾಗಿ ಮಾತನಾಡಿದ್ದು, ಈ ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಜೆಡಿಎಸ್ ಮುಖಂಡ ಟಿ.ಎ. ಶರವಣ ಆಗ್ರಹಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಝಮೀರ್ ಅಹ್ಮದ್ ನಮ್ಮ ನಾಯಕರ ಬಗ್ಗೆ ಲಘುವಾಗಿ ಮಾತನಾಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ತುಂಬಾ ಬೇಸರ ಮೂಡಿಸಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗಬಹುದು ಅಂದುಕೊಂಡಿದ್ದಾರೆ ಎಂದು ಶರವಣ ಕಿಡಿಕಾರಿದರು.

ಎಲ್ಲಿದ್ದಾರೆ ಜೆಡಿಎಸ್ ಶಾಸಕರು ಎಂದು ಝಮೀರ್ ಪ್ರಶ್ನಿಸಿದ್ದಾರೆ. ಆದರೆ, ನಿಮ್ಮದೇ ಕ್ಷೇತ್ರದ ಜನರಿಗೆ ನಾನು ಆಹಾರ ಕೊಟ್ಟಿದ್ದೇನೆ. ಕೋವಿಡ್ ಸಂದರ್ಭದಲ್ಲಿ ನಮ್ಮವರು ರಾಜಕೀಯ ಮಾಡಿಲ್ಲ. ಅಲ್ಲದೆ, ಸಮುದಾಯಗಳನ್ನು ಎತ್ತಿಕಟ್ಟೋದನ್ನು ನಿಲ್ಲಿಸಿ. ನಿಮ್ಮ ಪಕ್ಷದ ಬಗ್ಗೆ ನೋಡಿಕೊಳ್ಳಿ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಓಲೈಸಲು ಝಮೀರ್ ಅಹ್ಮದ್ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ನಿಮ್ಮದೇ ಪಕ್ಷದ ನಾಯಕರು ನಿಮಗೆ ಎಚ್ಚರಿಕೆ ನೀಡಿದ್ದು, ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದ ಅವರು, ಅವರು ಕೂಡಲೇ ಕ್ಷಮೆ ಕೇಳಬೇಕು. ಇಲ್ಲದೇ ಇದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News