ಸಿಎಎ ವಿರುದ್ಧ ಜೂ.25ರಿಂದ ಕ್ಯಾಂಪಸ್ ಫ್ರಂಟ್ ಅಭಿಯಾನ

Update: 2021-06-22 14:59 GMT

ಬೆಂಗಳೂರು, ಜೂ.22: ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಗೆ ಹೊರಟಿರುವ ಕ್ರಮ ಖಂಡಿಸಿ ಜೂ.25ರಿಂದ ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಮಾನತೆ ಎಂಬ ಧ್ಯೇಯ ವಾಕ್ಯದೊಂದಿಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಅಶ್ವಾನ್ ಸಾದಿಕ್ ತಿಳಿಸಿದ್ದಾರೆ.

ಸೋಮವಾರ ನಗರದ ಹಮೀದ್ ಶಾ ಕಟ್ಟಡದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಎ ವಿವಾದ ಕುರಿತು ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ನಡುವೆ ಕೇಂದ್ರ ಸರಕಾರವೂ ಸಂವಿಧಾನ ವಿರೋಧಿ ನಡೆ ಅನುಸರಿಸಿ, ಸಿಎಎ ಜಾರಿಗೆ ಕೈಹಾಕಿದೆ ಎಂದು ಆರೋಪ ಮಾಡಿದರು.

ಬರೀ ಸಿಎಎ ಮಾತ್ರವಲ್ಲದೆ, ರೈತ, ದಲಿತ, ಮಹಿಳಾ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಈಗಾಗಲೇ ಜಾರಿಗೆ ಮುಂದಾಗಿದೆ. ಇಂತಹ ಬೆಳವಣಿಗೆ ವಿರೋಧಿಸಿ ಜೂ.25ರಿಂದ ಏಳು ದಿನಗಳ ಕಾಲ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ ರಾಷ್ಟ್ರದ ಹಲವು ಚಿಂತಕರು, ಹೋರಾಟಗಾರರು ಪಾಲ್ಗೊಂಡು, ವಿಡಿಯೊ ಸಂವಾದ ಮೂಲಕ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರಕಾರ, ಬಿಜೆಪಿ ಹಾಗೂ ಸಂಘಪರಿವಾರದ ಸಂವಿಧಾನ ವಿರೋಧಿ ಕೃತ್ಯಗಳನ್ನು ಟೀಕಿಸಿದರೆ ಅಥವಾ ಪ್ರಶ್ನಿಸಿದರೆ ದೇಶದ್ರೋಹ ಪಟ್ಟ ಕಟ್ಟಿ ಜೈಲಿಗೆ ಹಾಕುವ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿವೆ. ಇನ್ನು, ಇದರ ವಿರುದ್ಧ ಧ್ವನಿಗೂಡಿಸಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮುಖಂಡರು, ವಿದ್ಯಾರ್ಥಿ ನಾಯಕರು ಜೈಲಿನಲ್ಲಿದ್ದಾರೆ ಎಂದು ಹೇಳಿದರು.

ಫ್ಯಾಸಿಸಂ ಎನ್ನುವುದು ದೇಶದ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಸಂರಚನೆಗೆ ನೈಜ ಬೆದರಿಕೆಯಾಗಿದೆ ಎಂದ ಅವರು, ಸಮರ್ಥ ಲಿಖಿತ ಸಂವಿಧಾನವನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತವು 1975ರಲ್ಲಿ ರಾಷ್ಟ್ರೀಯ ತುರ್ತು ಸ್ಥಿತಿಯನ್ನು ಎದುರಿಸಿತು. ಇದೀಗ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ವಿರುದ್ಧ ಎಲ್ಲರೂ ಜತೆಗೂಡಿ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಸ್ವದಖತ್ ಶಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರಾ, ರಾಜ್ಯ ಸಮಿತಿ ಸದಸ್ಯ ಝುಬೇರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News